ಪಲ್ಲವರು  : -
ದಕ್ಷಿಣ ಭಾರತದಲ್ಲಿ ಈಗಿನ ಆರ್ಕಾಟ್, ಮದ್ರಾಸ್, ತಿರುಚ್ಚಿರಪ್ಪಲ್ಲಿ ಮತ್ತು ತಂಜಾವೂರು ಜಿಲ್ಲೆಗಳಿರುವ ಪ್ರದೇಶವನ್ನಾಳಿದ ಪ್ರಾಚೀನ ರಾಜವಂಶ. ಈ ವಂಶದ ಅರಸರು ದಕ್ಷಿಣ ಭಾರತದ ರಾಜಕೀಯ ಮತ್ತು ಸಂಸ್ಕøತಿಕ ಇತಿಹಾಸದ ಮೇಲೆ ವಿಶೇಷ ಪ್ರಭಾವ ಬೀರಿದವರು. ಪಲ್ಲವ ದೊರೆಗಳು 3ನೆಯ ಶತಮಾನದಿಂದ 9ನೆಯ ಶತಮಾನದ ವೆರೆಗೂ ಪ್ರಬಲರಾಗಿದ್ದು. ವಿಶಾಲ ಸಾಮ್ರಾಜ್ಯ ಸ್ಥಾಪಿಸಿ ಆಳಿದರು.

ಪಲ್ಲವರು ಪಹವ ಅಥವಾ ಪಾರ್ಥಿಯನ್ ಬುಡಕಟ್ಟಿಗೆ ಸೇರಿದವರೆಂದು ಬಿ. ಎಲ್. ರೈಸ್, ವಿ. ವೆಂಕಯ್ಯ ಮುಂತಾದ ವಿದ್ವಾಂಸರು ಹೇಳಿದ್ದಾರೆ. ಪಲ್ಲವರು ಪರ್ಷಿಯದಿಂದ ಸಿಂಧೂ ಪ್ರದೇಶಕ್ಕೆ ಬಂದು, ಅನಂತರ ದಕ್ಷಿಣ ಭಾರತದಲ್ಲಿ ಕೊಂಡಮಂಡಲದಲ್ಲಿ ರಾಜ್ಯ ನಿರ್ಮಿಸಿ ಆಳಿದರೆಂಬುದು ಇವರ ಅಭಿಪ್ರಾಯ. ಆದರೆ ಈಚಿನ ಸಂಶೋಧನೆಗಳು ಪಲ್ಲವರು ಪರ್ಷಿಯನ್ ಅಥವಾ ಪಾರ್ಥಿಯನ್ ಮೂಲದವರೆಂಬ ವಾದವನ್ನು ನಿರಾಧಾರಗೊಳಿಸಿವೆ. ಪಲ್ಲವ ದೊರೆಗಳು ಹೊರಗಿನವರಲ್ಲವೆಂದೂ ಅವರು ವೈದಿಕ ಸಂಪ್ರದಾಯಕ್ಕೆ ಸೇರಿದವರಾಗಿದ್ದು. ಅಶ್ವಮೇಧಯಾಗ ಮುಂತಾದವನ್ನು ಆಚರಿಸುತ್ತಿದ್ದರೆಂದೂ ಹೇಳಲಾಗಿದೆ. ಪಲ್ಲವರು ಮತ್ತು ಪಹ್ಲವರು ಒಂದೇ ಗುಂಪಿಗೆ ಸೇರಿದವರಾಗಿದ್ದಲ್ಲಿ, ಪಲ್ಲವರ ದಾಖಲೆಗಳಲ್ಲಿ ಪಹ್ಲವರ ಪ್ರಸ್ತಾಪವಿರಬೇಕಿತ್ತು. ಹೊರಗಿನವರಾದ ಪಾರ್ಥಿಯನರು ಅಥವಾ ಪಲ್ಲವರು ಅತ್ಯಲ್ಪ ಸಮಯದಲ್ಲಿ ಭಾರತೀಯ ಸಂಪ್ರದಾಯಗಳನ್ನು ಅನುಸರಿಸಿ, ಆಶ್ವಮೇಧ ಯಾಗಗಳನ್ನು ಆಚರಿಸುತ್ತಿದ್ದರೆಂದು ಊಹಿಸುವುದು ಸಹ ಸಾಧ್ಯವಿಲ್ಲವೆಂದು ಡಿ. ಸಿ. ಸರ್ಕಾರ್ ಹೇಳಿದ್ದಾರೆ. ದಕ್ಷಿಣ ಭಾರತದ ಪಲ್ಲವರು ಮತ್ತು ಉತ್ತರದ ಪಲ್ಲವರು ಬೇರೆ ಬೇರೆಯವರೆಂದು ಗೂರ್ಜರ ಪ್ರತೀಹಾರ ದೊರೆಗಳ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ಮತ್ತು ವಿದ್ವಾಂಸ ರಾಜಶೇಖರ ಅಭಿಪ್ರಾಯಪಟ್ಟಿದ್ದಾನೆ.

ಪಲ್ಲವರು ಮೂಲತಃ ಸಿಂಹಳ ದ್ವೀಪಕ್ಕೆ ಸೇರಿದವರೆಂದು ಪ್ರಾಚೀನ ತಮಿಳು ಸಾಹಿತ್ಯದಿಂದ, ಮುಖ್ಯವಾಗಿ ಮಣಿಮೇಖಲೈ, ಶಿಲಪ್ಪದಿಕಾರಮ್ ಗ್ರಂಥಗಳಿಂದ ತಿಳಿದುಬರುತ್ತದೆ. ಸಿಂಹಳದ್ವೀಪದ ಬಳಿಯ ಮಣಿಪಲ್ಲವಂ ದ್ವೀಪದ ದೊರೆಯಾಗಿದ್ದ ನಾಗ ಗುಂಪಿಗೆ ಸೇರಿದ್ದ ಒಳೈವನಮ್ ಎಂಬವನ ಮಗಳು ಪಿಲ್ಲಿವಳೈ ಎಂಬ ರಾಜಕುಮಾರಿಯನ್ನು ಕಿಳ್ಳಿವಳರ್ವನ್ ಎಂಬ ಚೋಳ ದೊರೆ ವಿವಾಹವಾಗಿ ಒಬ್ಬ ಪುತ್ರನನ್ನು ಪಡೆದನೆಂದು ಮಣಿಮೇಖಲೈ ಗ್ರಂಥದಲ್ಲಿ ಬರುವ ಕಥೆಯೊಂದರಲ್ಲಿ ಹೇಳಿದೆ. ಆ ರಾಜಕುಮಾರ ಸಮುದ್ರದ ಮೇಲೆ ಪ್ರಯಾಣ ಮಾಡುತ್ತಿದ್ದಾಗ ಅವನ ಹಡಗು ಒಡೆದುಹೋಯಿತು. ಆದರೆ ಅವನು ಅಲೆಗಳ ಸಹಾಯದಿಂದ ಸಮುದ್ರ ದಂಡೆಯನ್ನು ತಲಪಿದಾಗ, ಅವನ ಕಾಲಿಗೆ ತೊಂಡೈ ಅಥವಾ ಬಳ್ಳಿ ಸುತ್ತಿಕೊಂಡಿತ್ತು. ಆದ್ದರಿಂದ ಅವನಿಗೆ ತೊಂಡೈಮನ್ ಎಂಬ ಹೆಸರೂ ಅವನು ಆಳಿದ ರಾಜ್ಯಕ್ಕೆ ತೊಂಡೈಮಂಡಲ ಎಂಬ ಹೆಸರೂ ಬಂದುವೆಂದೂ, ನಾಗಕುಲಕ್ಕೆ ಸೇರಿದ ತನ್ನ ತಾಯಿಯ ಊರಾದ ಮಣಿಪಲ್ಲವಂ ಎಂಬ ಹೆಸರಿನ ಪಲ್ಲವಂ ಪದವನ್ನೇ ಅವನು ತನ್ನ ಸಂತತಿಗೆ ಸೇರಿಸಿಕೊಂಡನೆಂದೂ ಹೇಳಲಾಗಿದೆ. ಆದರೆ ಈ ಕಥೆಯ ಆಧಾರದ ಮೇಲೆ ಪಲ್ಲವರ ಮೂಲವನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಏಕೆಂದರೆ ಪಲ್ಲವರ ಪ್ರಾರಂಭವಾದ ಪ್ರಾಕೃತ ಶಾಸನಗಳಲ್ಲಿ ನಾಗ ಸಂತತಿಯ ಸಂಬಂಧವಾಗಲಿ ತೊಂಡೈಮನ್ನನ ವರ್ಣನೆಯಾಗಲಿ ಕಂಡುಬರುವುದಿಲ್ಲ.

ಪಲ್ಲವರು ಉತ್ತರದ ಬ್ರಾಹ್ಮಣ ವಾಕಾಟಕ ದೊರೆಗಳ ಸಂತತಿಗೆ ಸೇರಿದವರೆಂದೂ ಅವರು ಕ್ಷತ್ರಿಯ ಧರ್ಮವನ್ನು ಅನುಸರಿಸಿ. ದಕ್ಷಿಣದಲ್ಲಿ ತಮ್ಮದೇ ಆದ ಒಂದು ರಾಜ್ಯವನ್ನು ಕಟ್ಟಿಕೊಂಡರೆಂದೂ ಕೆ.ಪಿ. ಜಯಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ. 
ಪಲ್ಲವರು ಉತ್ತರದವರು ಅಲ್ಲ, ಪರಕೀಯರು ಅಲ್ಲ. ಅವರು ದಕ್ಷಿಣ ಭಾರತದ ನಿವಾಸಿಗಳು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಪಲ್ಲವರು ಬಳ್ಳಾರಿ ಜಿಲ್ಲೆಗೆ ಸೇರಿದವರೆಂದೂ ಬನವಾಸಿಯ ನಾಗಕುಲದೊಂದಿಗೆ ವಿವಾಹಸಂಬಂಧ ಬೆಳಸಿಕೊಂಡು, ಶಾತಾವಾಹನರ ಅವನತಿಯ ಅನಂತರ ಕಾಂಚೀಪುರ ಅಥವಾ ಕಂಚಿ ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮದೇ ಆದ ರಾಜ್ಯ ಕಟ್ಟಿಕೊಂಡರೆಂದೂ ಹಿರೇಹಡಗಲಿ ಶಾಸನದ ಆಧಾರದ ಮೇಲೆ ಎಸ್. ಶ್ರೀಕಂಠಶಾಸ್ತ್ರಿ ಹೇಳಿದ್ದಾರೆ. ಪಲ್ಲವರು ದಕ್ಷಿಣ ಭಾರತದಲ್ಲವರೆಂಬುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದೂ ಅವರು ಕಂಚಿ ಪ್ರದೇಶದಲ್ಲಿ ತಮ್ಮ ಆಳ್ವಿಕೆ ಆರಂಬಿಸಿ ಕ್ರಮೇಣ ತಮ್ಮ ರಾಜ್ಯವನ್ನು ವಿಸ್ತರಿಸಿದರೆಂದೂ ಅವರ ರಾಜ್ಯದ ಬಹು ಭಾಗವನ್ನು ತೊಂಡಮಂಡಲ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂದೂ ಅನೇಕ ವಿದ್ವಾಂಸರು ವಾದಿಸಿದ್ದಾರೆ. ಪಲ್ಲವರು ದಕ್ಷಿಣದ ತೊಂಡಮಂಡಲದ ನಿವಾಸಿಗಳೆಂದೂ ಅವರಿಗೆ ಅಶೋಕನ ಶಾಸನಗಳಲ್ಲಿ ಪಲದ ಅಥವಾ ಪುಳಿಂದರೆಂಬ ಹೆಸರಿತ್ತೆಂದೂ ಶಾತವಾಹನರ ಅವನತಿಯ ಅನಂತರ ಅವರು ಪ್ರಸಿದ್ಧಿಗೆ ಬಂದರೆಂದೂ ಆರ್. ಸತ್ಯನಾಥ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಪಲ್ಲವರು ದಕ್ಷಿಣದವರೆಂಬ ವಾದವನ್ನು ಈಚಿನ ಸಂಶೋಧನೆಗಳು ಹೆಚ್ಚು ದೃಢಪಡಿಸಿವೆ. 

ಪಲ್ಲವ ವಂಶದ ಆರಂಭದ ಇತಿಹಾಸ ಅಸ್ಪಷ್ಟ. ಪಲ್ಲವರ ವಂಶವೃಕ್ಷ ಮತ್ತು ಕಾಲಾನುಕ್ರಮಣಿಕೆಗಳಿಗೆ ಸಂಬಂಧಿಸಿದಂತೆ ಇರುವ ವಿವರಗಳು ಹೆಚ್ಚು ತೊಡಕಿನವುಗಳಾಗಿವೆ. ಆರನೆಯ ಶತಮಾನದವೆರೆಗೂ ಆಳಿದ ಪಲ್ಲವ ದೊರೆಗಳು ಪ್ರಾಕೃತ ಮತ್ತು ಸಂಸ್ಕøತ ಶಾಸನಗಳ ಪಲ್ಲವ ಶಾಖೆಗಳಿಗೆ ಸೇರಿದವರೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಶಿವಸ್ಕಂದ ವರ್ಮ, ಅಂಕುರ ಮುಂತಾದವರು ಆರಂಭದ ರಾಜರುಗಳಲ್ಲಿ ಪ್ರಮುಖರು.

ನಾಲ್ಕನೆಯ ಶತಮಾನದ ಆದಿಭಾಗದಲ್ಲಿ ಆಳಿದ ಶಿವಸ್ಕಂಧ ವರ್ಮ ಆರಂಭದ ರಾಜರುಗಳಲ್ಲಿ ಹೆಚ್ಚು ಪ್ರಸಿದ್ಧನಾದವನು. ಪಲ್ಲವರ ಚರಿತ್ರೆ ಶಿವಸ್ಕಂಧವರ್ಮನ ಕಾಲದಿಂದಲೇ ಆರಂಭವಾಗುವುದೆಂದು ಹೇಳಲಾಗಿದೆ. ಶೂರನೂ ಪರಾಕ್ರಮಿಯೂ ಆಗಿದ್ದ ಶಿವಸ್ಕಂಧವರ್ಮನ ರಾಜ್ಯ ಕೃಷ್ಣಾನದಿಯಿಂದ ದಕ್ಷಿಣ ಪೆನ್ನಾರ್ ಮತ್ತು ಬಳ್ಳಾರಿ ಜಿಲ್ಲೆಯ ವರೆಗೆ ಹಬ್ಬಿತ್ತು. ಕಂಚಿ ಅವನ ರಾಜಧಾನಿಯಾಗಿತ್ತು. ತನ್ನ ಶೌರ್ಯ ಹಾಗೂ ಸೈನಿಕ ಸಾಧನೆಗಳ ನೆನಪಾಗಿ ಶಿವಸ್ಕಂಧವರ್ಮ ಆಶ್ವಮೇಧ ಯಾಗಗಳನ್ನು ಆಚರಿಸಿ ರಾಜಾಧಿರಾಜ, ಧರ್ಮಸಂರಕ್ಷಕ ಎಂಬ ಬಿರುದುಗಳನ್ನು ಧರಿಸಿದ್ದ. ಮೌರ್ಯರ ಆಡಳಿತಕ್ರಮವನ್ನು ಶಿವಸ್ಕಂದವರ್ಮ ಅನುಸರಿಸಿದ್ದನೆಂದು ತಿಳಿಯ ಬರುತ್ತದೆ.

ಸಂಸ್ಕøತ ಶಾಸನ ಪದ್ಧತಿಯನ್ನು ಜಾರಿಗೆ ತಂದ ಕಂಚಿ ಪಲ್ಲವ ಶಾಖೆಯ ಹದಿನಾರಕ್ಕೂ ಹೆಚ್ಚು ರಾಜರು 350 ರಿಂದ 575ರ ವರೆಗೆ ಆಳಿದರೆಂದು ತಿಳಿದು ಬರುತ್ತದೆ. ಒಂದನೆಯ ಸಿಂಹವರ್ಮ, 1ನೆಯ ಸ್ಕಂಧವರ್ಮ ವೀರಕುರ್ಚ, 2ನೆಯ ಸ್ಕಂಧವರ್ಮ, ವಿಷ್ಣುಗೋಪ ಮುಂತಾದವರು ಇವರಲ್ಲಿ ಪ್ರಮುಖರಾದವರು. ಈ ರಾಜರ ಕಾಲವನ್ನು ನಿರ್ಧರಿಸಲು ಅನೇಕ ತೊಡಕುಗಳಿವೆ. ಉತ್ತದರ ಗುಪ್ತ ದೊರೆ ಸಮುದ್ರಗುಪ್ತ ದಕ್ಷಿಣಾಪಥದ ಮೇಲೆ ದಂಡೆತ್ತಿ ಬಂದು ಸೋಲಿಸಿದ ದೊರೆಗಳಲ್ಲಿ ಕಂಚಿಯ ವಿಷ್ಣುಗೋಪನೂ ಒಬ್ಬ. ವಿಷ್ಣುಗೋಪ ಇತರರೊಡನೆ ಸೇರಿಕೊಂಡು ಸಮುದ್ರಗುಪ್ತನನ್ನು ಸೋಲಿಸಿದನೆಂಬ ವಾದ ಸತ್ಯಕ್ಕೆ ದೂರವಾದ್ದು ಕಂಚಿಯ ಬಳಿ ನಡೆದ ಯುದ್ಧದಲ್ಲಿ ಸಮುದ್ರಗುಪ್ತ ವಿಷ್ಣು ಗೋಪನನ್ನು ಸಂಪೂರ್ಣವಾಗಿ ಪರಾಭವಗೊಳಿಸಿ. ಸಮುದ್ರಗುಪ್ತ ಜಯಶೀಲನಾದರೂ ಪಲ್ಲವ ರಾಜಧಾನಿಗೆ ಬರಲಿಲ್ಲ. ಸಮುದ್ರಗುಪ್ತ ಗೆದ್ದ ಪ್ರದೇಶಗಳನ್ನು ವಿಷ್ಣು ಗೋಪನಿಗೆ ಹಿಂದಿರುಗಿಸಿ, ಅವನಿಂದ ಕಪ್ಪಕಾಣಿಕೆಗಳನ್ನು ಪಡೆದು ಉತ್ತರಕ್ಕೆ ಮರಳಿದ.

ಕೆಲವು ಶಿಲಾಶಾಸನಗಳಿಂದ ತಿಳಿದುಬರುವಂತೆ ವೀರ ಕುರ್ಚ ನಾಗಕುಮಾರಿಯೊಬ್ಬಳನ್ನು ವಿವಾಹವಾಗಿ ರಾಜನಾದ. ವೀರ ಕುರ್ಚ ತನ್ನದೇ ಆದ ಪಲ್ಲವ ಸಂತತಿಯನ್ನು ಆರಂಭಿಸಿದನೆಂದು ಕೆಲವು ಇತಿಹಾಸಕಾರರು ಇದನ್ನು ಆಧಾರವಾಗಿಟ್ಟುಕೊಂಡು ವಾದಿಸಿದ್ದಾರೆ. ಅದರೆ ಇದು ಸರಿಯಲ್ಲವೆಂದು ಕಾಣಿಸುತ್ತದೆ. ಸಮುದ್ರ ಗುಪ್ತ ದಕ್ಷಿಣಾಪಥದ ಮೇಲೆ ನಡೆಸಿದ ಆಕ್ರಮಣದಿಂದ ಉಂಟಾದ ರಾಜಕೀಯ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ತನ್ನ ಅಧಿಕಾರವನ್ನು ಭದ್ರಗೊಳಿಸಿಕೊಳ್ಳಲು ವೀರಕುರ್ಚ ವಿವಾಹ ಸಂಬಂಧ ಬೆಳಿಸಿದ್ದಿರಬೇಕು. ಅವನು ಪ್ರತ್ಯೇಕ ಪಲ್ಲವ ಸಂತತಿಯೊಂದನ್ನು ಆರಂಭಿಸಿದನೆಂಬ ವಾದದಲ್ಲಿ ಹುರುಳಿಲ್ಲ.

575ರ ಸುಮಾರಿನಲ್ಲಿ ಅಧಿಕಾರಕ್ಕೆ ಬಂದ. 3ನೆಯ ಸಿಂಹವರ್ಮನ ಮಗ ಸಿಂಹವಿಷ್ಣುವಿನ ಕಾಲದಿಂದ ಪಲ್ಲವರ ರಾಜಕೀಯ ಇತಿಹಾಸ ಹೆಚ್ಚು ಸ್ಪಷ್ಟವಾಗಿ ತಿಳಿದು ಬರುತ್ತದೆ. ಸಿಂಹವಿಷ್ಣು ಗದ್ದುಗೆ ಏರಿದಾಗ ಶ್ರೇಷ್ಠ ಹಾಗೂ ಪ್ರಖ್ಯಾತ ಪಲ್ಲವ ರಾಜರ ಕಾಲ ಆರಂಭವಾಯಿತಲ್ಲದೆ, ಪಲ್ಲವ ಇತಿಹಾಸದಲ್ಲಿ ಅಭ್ಯುದಯಭರಿತ ಯುಗವೊಂದು ಆರಂಭವಾಯಿತು. ಪಲ್ಲವರ ಮಹತ್ತಾದ ರಾಜಕೀಯ ಹಾಗೂ ಸಾಂಸ್ಕøತಿಕ ಸಾಧನೆಗಳಿಗೆ ಅಸ್ತಿಭಾರ ಹಾಕಿದ ಕೀರ್ತಿ ಸಿಂಹವಿಷ್ಣುವಿಗೆ ಸಲ್ಲಬೇಕು. ವಿಸ್ತರಣವಾದಿಯಾಗಿದ್ದ ಸಿಂಹವಿಷ್ಣುವು ಚೋಳರು, ಪಾಂಡ್ಯರು ಮತ್ತು ಕಲಭ್ರರನ್ನು ಸದೆಬಡೆದು, ಕಂಚಿಯಲ್ಲಿ ಪಲ್ಲವ ಪ್ರಭುತ್ವವನ್ನು ಭದ್ರಗೊಳಿಸಿದ. ಚೋಳಮಂಡಲವನ್ನು ಗೆದ್ದುಕೊಂಡದ್ದು ಸಿಂಹವಿಷ್ಣುವಿನ ಪ್ರಮುಖ ಸೈನಿಕ ಸಾಧನೆ. ಸಿಂಹವಿಷ್ಣುವಿನ ಪ್ರಭುತ್ವ ಮದರಾಸಿನಿಂದ ಕುಂಭಕೋಣಂವರೆಗೂ ಹಬ್ಬಿತ್ತೆಂದು ತಿಳಿದುಬರುತ್ತದೆ. ವೈಷ್ಣವ ಮತಾವಲಂಬಿಯಾಗಿದ್ದ ಸಿಂಹವಿಷ್ಣುವಿಗೆ ಅವನಿಸಿಂಹ ಎಂಬ ಬೇರೊಂದು ಹೆಸರಿತ್ತು. ಅವನಿಭಾಜನ, ಲಲಿತಾಂಕುರ, ಶತ್ರುಮಲ್ಲ ಮುಂತಾದ ಬಿರುದುಗಳು ಇವನಿಗಿದ್ದವು. ಇವನು ಮಹಾಪರಾಕ್ರಮಿಯಾಗಿದ್ದುದಲ್ಲದೆ, ಸಂಗೀತ ಸಾಹಿತ್ಯ ಪಕ್ಷಾಪಾತಿಯಾಗಿದ್ದ; ಲಲಿತಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಕಿರಾತಾರ್ಜುನೀಯ ಗ್ರಂಥ ಬರೆದ ಪ್ರಸಿದ್ಧ ಕವಿ ಭಾರವಿ ಇವನ ಕಾಲದಲ್ಲಿ ಕಂಚಿಗೆ ಭೇಟಿ ನೀಡಿದ್ದ. ಸಿಂಹವಿಷ್ಣುವಿನ ಮತ್ತು ಇವನ ರಾಣಿಯರ ಚಿತ್ರಗಳು ಮಹಾಬಲಿಪುರದ ಆದಿವರಾಹ ಗುಡಿಯಲ್ಲಿವೆ. ಮಹಾಬಲಿಪುರ ಪ್ರಖ್ಯಾತ ಶಿಲ್ಪಕೇಂದ್ರವಾಗಿ ಬೆಳೆಯಲು ಸಿಂಹವಿಷ್ಣು ಕಾರಣವಾಗಿದ್ದಿರಬೇಕು.
ಮಹೇಂದ್ರವರ್ಮ 1: 600ರಿಂದ 630ರ ವರೆಗೆ ಆಳಿದ ಒಂದನೆಯ ಮಹೇಂದ್ರವರ್ಮ ಸಿಂಹವಿಷ್ಣುವಿನ ಪುತ್ರ ಮತ್ತು ಉತ್ತರಾಧಿಕಾರಿ. ಇವನು ಪಲ್ಲವ ರಾಜವಂಶದಲ್ಲೇ ಅತ್ಯಂತ ಹೆಸರಾಂತ ದೊರೆ. ಈತ ಚತುರ. ಕವಿ, ಸಂಗೀತಗಾರ ಮತ್ತು ರಾಜ್ಯಸಂಸ್ಥಾಪಕನೆಂದು ಕೀರ್ತಿ ಪಡೆದವ. ಇವನ ಕಾಲದಲ್ಲೇ ಪ್ರಸಿದ್ಧ ಪಲ್ಲವ-ಚಾಳುಕ್ಯ ಕದನಗಳು ಆರಂಭವಾದ್ದು. ಪಲ್ಲವ ರಾಜ್ಯಕ್ಕೂ ಕನ್ನಡ ರಾಜ್ಯಕ್ಕೂ ಉದ್ಭವಿಸುವ ರಾಜಕೀಯ ವೈಷಮ್ಯ ಆಜನ್ಮದ್ವೇóಷದ ರೂಪ ತಾಳಿ ಅನೇಕ ಶತಮಾನಗಳ ಕಾಲ ಮುಂದುವರಿಯಿತು.

ಪಲ್ಲವರು ತಮ್ಮ ಪ್ರಭುತ್ವಕ್ಕೆ ವಿರುದ್ಧವಾಗಿದ್ದರೆಂಬ ಕಾರಣದಿಂದ ಚಾಳುಕ್ಯರ ಪ್ರಖ್ಯಾತ ದೊರೆ ಇಮ್ಮಡಿ ಪುಲಕೇಶಿ 1ನೆಯ ಮಹೇಂದ್ರವರ್ಮನ ವಿರುದ್ಧ ಯುದ್ಧ ಹೂಡಿ. ಪಲ್ಲವ ರಾಜ್ಯದ ಉತ್ತರ ಭಾಗದ ಮೇಲೆ ದಾಳಿ ನಡೆಸಿದ. ಮಹೇಂದ್ರವರ್ಮ ಧೈರ್ಯಸಾಹಸಗಳಿಂದ ಹೋರಾಡಿದರೂ ಮೇಲಿಂದ ಮೇಲೆ ಚಾಳುಕ್ಯ ಸೇನೆಯಿಂದ ಅಪಜಯ ಅನುಭವಿಸಿದ. ಇಮ್ಮಡಿ ಪುಲಕೇಶಿ ಪಲ್ಲವರಿಂದ ವೆಂಗಿಮಂಡಲವನ್ನು ಗೆದ್ದುಕೊಂಡು, ಆ ಪ್ರದೇಶಕ್ಕೆ ತನ್ನ ಸೋದರ ವಿಷ್ಣುವರ್ಧನನ್ನು ಆಧಿಪತಿಯಾಗಿ ನೇಮಿಸಿದ. ಚಾಳುಕ್ಯ ಪಲ್ಲವ ಸೇನೆಗಳ ನಡುವಣ ಹೋರಾಟದ ವಿವರಣೆಯನ್ನು ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನ ನೀಡುತ್ತದೆ. ಪುಲಕೇಶಿ ತನ್ನ ಸೈನ್ಯದ ದೂಳಿನಿಂದ ಪಲ್ಲವರ ವೈಭವವನ್ನು ನಾಶಗೊಳಿಸಿದನಲ್ಲದೆ, ಮಹೇಂದ್ರವರ್ಮನನ್ನು ಕಾಂಚೀಪುರದ ಗೋಡೆಗಳ ಹಿಂದೆ ಸರಿಯುವಂತೆ ಮಾಡಿದ ಎಂದು ಈ ಶಾಸನ ಹೇಳಿದೆ. ಪುಲಕೇಶಿಯ ಮುನ್ನಡೆಯನ್ನು 1ನೆಯ ಮಹೇಂದ್ರವರ್ಮ ಕಾಂಜೀವರಂ ಬಳಿಯ ಪುಲ್ಲಲೂರಿನಲ್ಲಿ ತಡೆಹಿಡಿದ.

1ನೆಯ ಮಹೇಂದ್ರವರ್ಮನ ಆಳ್ವಿಕೆ ಶಾಂತಿ ಮತ್ತು ಸುಸಂಸ್ಕøತಿಯ ಬೆಳವಣಿಗೆಯ ದೃಷ್ಟಿಯಿಂದ ಪ್ರಾಮುಖ್ಯ ಪಡೆದಿದೆ. ಇವನು ಕಲೆ ಸಾಹಿತ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿದ. ಮೊದಲು ಜೈನಮತಾವಲಂಬಿಯಾಗಿದ್ದ ಇವನು ಹೆಸರಾಂತ ಶೈವಸಂತರಾಗಿದ್ದ ಅಪ್ಪಾರರ ಪ್ರಭಾವಕ್ಕೆ ಒಳಗಾಗಿ ಶೈವ ಧರ್ಮ ಸ್ವೀಕರಿಸದನೆಂದು ಪೆರಿಯಪುರಾಣ ತಿಳಿಸುತ್ತದೆ. ಅಪ್ಪಾರ್, ತಿರುಜ್ಞಾನ ಸಂಬಂಧರ್ ಮುಂತಾದ ಶೈವ ಸಂತರೂ ಪ್ರಸಿದ್ಧ ಕವಿ ಭಾರವಿಯೂ ಮಹೇಂದ್ರವರ್ಮನ ಸಮಕಾಲೀನರಾಗಿದ್ದರು. ಸಂಗೀತದಲ್ಲಿ ಇವನು ಹೆಚ್ಚು ಆಸಕ್ತಿ ಅಭಿರುಚಿ ಹೊಂದಿದ್ದ. ರುದ್ರಾಚಾರ್ಯ ಎಂಬ ಪ್ರಖ್ಯಾತ ಸಂಗೀತ ವಿದ್ವಾಂಸರ ಶಿಷ್ಯನಾಗಿದ್ದ. ಒಂದನೆಯ ಮಹೇಂದ್ರವರ್ಮ ಪರಿವೀಣಾ ಎಂಬ ವಾದ್ಯವನ್ನು ನುಡಿಸುವುದರಲ್ಲಿ ಪರಿಣತಿ ಪಡೆದಿದ್ದ. ಮಹೇಂದ್ರವರ್ಮನ ಆಜ್ಞಾನುಸಾರ ಪುದಿಕೋಟೆ ಬಳಿ ಕುಡಿಮಿಯಾಮಲೈ ಎಂಬಲ್ಲಿ ಸಂಸ್ಕøತದಲ್ಲಿ ಕೆತ್ತಲಾಗಿರುವ ಶಾಸನ, ಕರ್ನಾಟಕದ ಬಗ್ಗೆ ಅಧ್ಯಯನ ನಡೆಸಲು ಅಮೂಲ್ಯ ಆಧಾರವೆನಿಸಿದೆ. ಕವಿಗಳಿಗೆ ಆಶ್ರಯ ನೀಡಿದ್ದ ಇವನು ಬರಹಗಾರನೂ ಆಗಿದ್ದ. ಇವನು ಮತ್ತವಿಲಾಸಪ್ರಹಸನ ಎಂಬ ಸಂಸ್ಕøತ ಗ್ರಂಥವನ್ನು ರಚಿಸಿದ್ದಾನೆ. ಕಾಪಾಲಿಕ ಪಂಥದ ಮತ್ತು ಬೌದ್ಧ ಭಿಕ್ಷುಗಳ ಕಪಟ ಜೀವನವನ್ನು ಬಯಲಿಗೆಳೆಯುವ ಉದ್ದೇಶದಿಂದ ಬರೆದ ಈ ಗ್ರಂಥ ಆಗಿನ ಧಾರ್ಮಿಕ ಮತ್ತು ಸಮಾಜಿಕ ಸ್ಥಿತಿಗತಿಗಳಿಗೆ ತಿಳಿದುಕೊಳ್ಳಲು ಹೆಚ್ಚು ಸಹಕಾರಿಯಾಗಿದೆ.
ಮಹೇಂದ್ರವರ್ಮ ಕಾಲದಲ್ಲಿ ಕಲೆ ಔನ್ನತ್ಯ ಪಡೆದಿತ್ತು. ವಾಸ್ತು ಶಿಲ್ಪ, ಚಿತ್ರ ಮತ್ತು ನೃತ್ಯ ಕಲೆಗಳಿಗೆ ಇವನು ವಿಶೇಷ ಪ್ರೋತ್ಸಾಹ ನೀಡಿದ. ಮಹಾಬಲಿಪುರಂ, ತಿರುಚಿ, ಸಿತ್ತನ್ನವಾಸಲ್, ದಳವನೂರು, ಮಹೇಂದ್ರವಾಡಿ ಮುಂತಾದೆಡೆಗಳಲ್ಲಿ 1ನೆಯ ಮಹೇಂದ್ರವರ್ಮನ ಕಾಲದಲ್ಲಿ ಶೈವ ಮತ್ತು ವೈಷ್ಣವ ಗುಹಾಲಯಗಳು ನಿರ್ಮಿತವಾದುವು. ಬರಿಯ ಕಲ್ಲಿನಿಂದ ಗುಡಿಗಳನ್ನು ಕಟ್ಟುವ ಪದ್ಧತಿ ಇವನ ಕಾಲದಿಂದ ಜಾರಿಗೆ ಬಂತು. ಸಿತ್ತನ್ನವಾಸಲ್‍ನಲ್ಲಿ ಕಟ್ಟಿರುವ ಜೈನ ಗುಡಿಯಲ್ಲಿ ವಿವಿಧ ವಿನ್ಯಾಸಗಳಲ್ಲಿ ಬಿಡಿಸಿರುವ ವರ್ಣಚಿತ್ರ ಮತ್ತು ನೃತ್ಯಚಿತ್ರಗಳು ಅತ್ಯಂತ ಮನಮೋಹಕವಾಗಿವೆ. ಮಹಾಬಲಿಪುರದ ಗುಹೆಯೊಂದರಲ್ಲಿ ಮಹೇಂದ್ರವರ್ಮ ಮತ್ತು ಆತನ ರಾಣಿಯರ ಶಿಲಾಕೃತಿಗಳನ್ನು ಈಗಲೂ ಕಾಣಬಹುದು. ಮಹೇಂದ್ರ ವರ್ಮನಿಗೆ ಮತ್ತವಿಲಾಸ, ವಿಚಿತ್ರ ಚಿತ್ತ, ಚೈತ್ಯಕಾರಿ, ಚಿತ್ತಕಾರಪುಲಿ, ಗುಣಭಾರ, ಪರಮ ಮಹೇಶ್ವರ ಮುಂತಾದ ಬಿರುದುಗಳಿದ್ದುವು. ಮಹೇಂದ್ರವರ್ಮ ಸಾಹಿತ್ಯ ಸಂಗೀತಗಳಲ್ಲಿ ಪಡೆದಿದ್ದ ಅಭಿರುಚಿ ಮತ್ತು ಪ್ರೌಢಿಮೆಗಳಿಗೆ ಇವು ಸಂಕೇತವಾಗಿದ್ದಿರಬೇಕು.

ನರಸಿಂಹವರ್ಮ 1: 630-668. ಇವನು 1ನೆಯ ಮಹೇಂದ್ರವರ್ಮನ ಪುತ್ರ ಹಾಗೂ ಉತ್ತರಾಧಿಕಾರಿ. ವೀರನೂ ಕಲಾಭಿಮಾನಿಯೂ ಆಗಿದ್ದ ಇವನಿಗೆ ಮಹಾಮಲ್ಲ (ಮಾಮಲ್ಲ) ಎಂಬ ಹೆಸರೂ ಇತ್ತು. ಇವನು ವೈವಿಧ್ಯಮಯ ಸಾಧನೆಗಳಿಂದ ದಕ್ಷಿಣ ಭಾರತಾದ್ಯಂತ ಖ್ಯಾತಿ ಗಳಿಸಿದ. ಇವನು ಸಮರ್ಥ ರಾಜಕಾರಣಿ. ದಕ್ಷ ಆಡಳಿತಗಾರ ಮತ್ತು ಮಹಯೋಧನಾಗಿದ್ದ. ಇವನ ಕಾಲದಲ್ಲಿ ಪಲ್ಲವ ರಾಜ್ಯ. ವಿಸ್ತಾರವಾಗಿ ಬೆಳೆದು ಬಲಿಷ್ಠವಾಯಿತು. ಇವನ ಆಳ್ವಿಕೆಯಲ್ಲಿ ಮಹತ್ತ್ವಪೂರ್ಣ ಘಟನೆಗಳು ಜರುಗಿದವು.

ಇವನು ಚಾಳುಕ್ಯ ದೊರೆ ಇಮ್ಮಡಿ ಪುಲಕೇಶಿಯ ಮೇಲೆ ಸೇಡು ತೀರಿಸಿಕೊಳ್ಳಲು ಪುಲಕೇಶಿಯ ಇವನಿಗೆ ಅವಕಾಶ ಒದಗಿಸಿಕೊಟ್ಟ. ಪಲ್ಲವರ ಸಾಮಂತರಾಗಿದ್ದ ಬಾಣರನ್ನು ಪುಲಕೇಶಿ ಪರಾಭವಗೊಳಿಸಿ ಅವರ ಪ್ರದೇಶಗಳನ್ನು ವಶಪಡಿಸಿಕೊಂಡ. ಪಲ್ಲವರ ರಾಜಧಾನಿಯನ್ನು ಆಕ್ರಮಿಸಿಕೊಳ್ಳುವ ಉದ್ಧೇಶದಿಂದ ಅವನು ತನ್ನ ಸೇನೆ ವರ್ಮ ಪುಲಕೇಶಿಯ ವಿರುದ್ಧ ದಂಡೆತ್ತಿ ಬಂದ. ಶ್ರೀ ಹರ್ಷನನ್ನು ಮತ್ತು ತನ್ನ ತಂದೆ ಮಹೇಂದ್ರವರ್ಮನನ್ನು ಸೋಲಿಸಿದ್ದ 2ನೆಯ ಪುಲಕೇಶಿಯನ್ನ ಪಲ್ಲವ ದೊರೆ ಪರಿಯಾಲ, ಮಣಿಮಂಗಲ ಮತ್ತು ಸುರಮಾರ ಕದನಗಳಲ್ಲಿ ಸಂಪೂರ್ಣವಾಗಿ ಬಗ್ಗು ಬಡಿದ. ಪುಲಕೇಶಿ ರಣರಂಗದಿಂದ ಹಿಮ್ಮೆಟ್ಟಬೇಕಾಯಿತು. ಅನಂತರ ನರಸಿಂಗವರ್ಮ ಭಾರಿ ಸೈನ್ಯದೊಂದಿಗೆ ತನ್ನ ಸೈನ್ಯಾಧಿಕಾರಿ ಸಿರುತ್ತೊಂಡ ನಾಯನಾರ್ ಎಂಬವನನ್ನು ಚಾಳುಕ್ಯರ ರಾಜಧಾನಿ ಬಾದಾಮಿಗೆ ಮುತ್ತಿಗೆ ಹಾಕಲು ಕಳುಹಿಸಿದ. ಬಾದಾಮಿಯ ಬಳಿ ನಡೆದ ಭೀಕರ ಕಾಳಗದಲ್ಲಿ 2ನೆಯ ಪುಲಕೇಶಿ ಸೋತು ಪ್ರಾಣಬಿಟ್ಟ. 642ರಲ್ಲಿ ನರಸಿಂಹವರ್ಮ ಬಾದಾಮಿಯನ್ನು ವಶಪಡಿಸಿಕೊಂಡು ವಾತಾಪಿಕೊಂಡ ಎಂಬ ಬಿರುದು ಧರಿಸಿದ. ಇಮ್ಮಡಿ ಪುಲಕೇಶಿಯ ಸಾವಿನ ಅನಂತರ ಸುಮಾರು 13 ವರ್ಷಗಳ ವರೆಗೆ, ಚಾಳುಕ್ಯ ರಾಜ್ಯದ ದಕ್ಷಿಣ ಭಾಗಗಳು ಪಲ್ಲವರ ವಶದಲ್ಲಿದ್ದುವು. ನರಸಿಂಹವರ್ಮ ವಾತಾಪಿಯನ್ನು ವಶಪಡಿಸಿಕೊಂಡಿದ್ದನೆಂಬುದಕ್ಕೆ ಬಾದಾಮಿಯ ಮಲ್ಲಿಕಾರ್ಜುನ ದೇವಾಲಯದ ಹಿಂಭಾಗದಲ್ಲಿ ಬಂಡೆಯೊಂದರ ಮೇಲೆ ಕೆತ್ತಿರುವ ಶಾಸನ ಸಾಕ್ಷಿಯಾಗಿ ಉಳಿದಿದೆ. ಇಮ್ಮಡಿ ಪುಲಕೇಶಿ ಸತ್ತ ಅನಂತರವೂ ಚಾಳುಕ್ಯ-ಪಲ್ಲವರ ಹೋರಾಟ ಮುಂದುವರೆಯಿತು.

ಚೋಳ, ಚೇರ, ಕಲಭ್ರ ಮತ್ತು ಪಾಂಡ್ಯರ ಮೇಲೂ ನರಸಿಂಹವರ್ಮ ಹೋರಾಡಿ ಯಶಸ್ವಿಯಾದನೆಂದು ತಿಳಿದುಬರುತ್ತದೆ. ಸಿಂಹಳ ದ್ವೀಪದ ಮೇಲೂ ನರಸಿಂಹವರ್ಮ ದಂಡಯಾತ್ರೆ ನಡೆಸಿದ. ಈ ದಂಡಯಾತ್ರೆಯ ವಿವರಗಳು ಮಹಾ ವಂಶ ಗ್ರಂಥದಲ್ಲಿ ದೊರಕುತ್ತವೆ. ಸಿಂಹಳದ ರಾಜಕುಮಾರ ಮಾನವರ್ಮ ಶತ್ರುಗಳ ಉಪಟಳದಿಂದ ಸಿಂಹಾಸನವನ್ನು ಕಳೆದುಕೊಂಡು ಪಲ್ಲವ ರಾಜನ ಆಶ್ರಯ ಪಡೆದ. ಅವನು ನರಸಿಂಹ ವರ್ಮನ ಅನೇಕ ಯುದ್ಧಗಳಲ್ಲಿ ಹೋರಾಡಿ ಅವನ ಪ್ರೀತಿವಿಶ್ವಾಸಗಳಿಗೆ ಪಾತ್ರನಾಗಿದ್ದ. ಮಾನವರ್ಮನಿಗೆ ಸಿಂಹಾಸನವನ್ನು ಮತ್ತೆ ದೊರಕಿಸಿಕೊಡಲು ನರಸಿಂಹವರ್ಮ ಮಹಾಬಲಿಪುರದ ರೇವಿನಿಂದ ನೌಕಾದಳವೊಂದನ್ನು ಕಳುಹಿಸಿದ. ಸಿಂಹಳನದಲ್ಲಿ ಮಾನವವರ್ಮನೊಂದಿಗೆ ಪಲ್ಲವ ಸೈನಿಕರು ವೀರಾವೇಶದಿಂದ ಹೋರಾಡಿ, ಮಾನವರ್ಮನೊಂದಿಗೆ ಪಲ್ಲವ ಸೈನಿಕರು ವೀರಾವೇಶದಿಂದ ಹೋರಾಡಿ. ಮಾನವರ್ಮನಿಗೆ ಸಿಂಹಾಸನವನ್ನು ಮತ್ತೆ ದೊರಕಿಸಿ ಕೊಡುವಲ್ಲಿ ಜಯಶೀಲರಾದರು.

642ರಲ್ಲಿ ಚೀನದ ಯಾತ್ರಿಕ ಹುಯೆನ್‍ತ್ಸಾಂಗ್ ಪಲ್ಲವ ರಾಜಧಾನಿ ಕಂಚಿಗೆ ಭೇಟಿ ನೀಡಿದನಲ್ಲದೆ ತೊಂಡಮಂಡಲದಲ್ಲಿ ಸಂಚರಿಸಿದ. ತೊಂಡಮಂಡಲದ ಬಗ್ಗೆ ಹುಯೆನ್‍ತ್ಸಾಂಗ್ ನೀಡಿರುವ ವಿವರಣೆ ಅತ್ಯಂತ ಉಪಯುಕ್ತವಾದ್ದು. ಪಲ್ಲವ ರಾಜ್ಯದ ಸುತ್ತಳತೆ ಒಂದು ಸಾವಿರ ಮೈಲಿಗಳೆಂದು ಅವನು ಬರೆದಿದ್ದಾನೆ. ತೊಂಡಮಂಡಲ ಪ್ರದೇಶವನ್ನು ಅವನು ದ್ರಾವಿಡನಾಡು ಎಂದು ಕರೆದಿದ್ದಾನೆ. ಕಂಚಿಯ ಸುತ್ತಳತೆ ಆರು ಮೈಲಿಯೆಂದೂ ಅಲ್ಲಿ ಹತ್ತು ಸಾವಿರ ಬೌದ್ಧ ಸಂನ್ಯಾಸಿಗಳಿದ್ದರೆಂದೂ ನೂರಕ್ಕೂ ಹೆಚ್ಚು ಬೌದ್ಧ ವಿಹಾರಗಳಿದ್ದುವೆಂದೂ ಆ ರಾಜಧಾನಿಯಲ್ಲಿ ದಿಗಂಬರ ಜೈನರೂ ಇದ್ದರೆಂದೂ ಬರೆದಿದ್ದಾನೆ. ಕಂಚಿ ಬರೀ ಧಾರ್ಮಿಕ ಕ್ಷೇತ್ರವಾಗಿರದೆ ಜ್ಞಾನದೇಗುಲವಾಗಿತ್ತೆಂದು ಹೇಳಿದ್ದಾನೆ. ಕಂಚಿಯಲ್ಲಿ ಸುಂದರವಾದ ಜೈನಬಸದಿಗಳು, ಬೌದ್ಧವಿಹಾರಗಳು ಮತ್ತು ಹಿಂದೂ ದೇವಾಲಯಗಳನ್ನು ಅವನು ಕಂಡ ನಾಲಂದ ವಿಶ್ವವಿದ್ಯಾಯಲಯದ ಪ್ರಸಿದ್ಧ ಪ್ರಾಚರ್ಯ ಧರ್ಮಪಾಲ ಕಂಚಿಯವನೆಂದು ಹುಯೆನ್‍ತ್ಸಾಂಗನ ಬರಹಗಳಲ್ಲಿ ಹೇಳಲಾಗಿದೆ.

ತನ್ನ ತಂದೆಯಂತೆ ನರಸಿಂಹವರ್ಮನೂ ಪ್ರಸಿದ್ಧ ಕಲಾಭಿಮಾನಿಯೂ ಕಲಾ ಪೋಷಕನೂ ಆಗಿದ್ದ. ಇವನು ಅನೇಕ ದೇವಾಲಯಗಳನ್ನೂ ನಿರ್ಮಿಸಿ ಪಲ್ಲವರ ವಾಸ್ತುಶಿಲ್ಪಕಲಾಹಿರಿಮೆಯನ್ನು ಪ್ರಕಾಶಕ್ಕೆ ತಂದ. ಇವನು ಮಹಾಬಲಿಪುರದಲ್ಲಿ ಅನೇಕ ಕಲಾಕೃತಿಗಳನ್ನು ನಿರ್ಮಿಸಿದ. ಇವನ ಕಾಲದಲ್ಲಿ ಅದು ಪಲ್ಲವರ ಎರಡನೆಯ ರಾಜಧಾನಿಯಾಯಿತಲ್ಲದೆ ಒಂದು ಸುಂದರ ಮತ್ತು ಮನಮೋಹಕ ಕಲಾಕ್ಷೇತ್ರವಾಗಿ ಮೆರೆಯಿತು. ವಾಣಿಜ್ಯ ಕೇಂದ್ರವಾಯಿತು. ಅಲ್ಲಿ ಜಗತ್ಪ್ರಸಿದ್ದ ತೀರದೇವಾಲಯ, ಅನೇಕ ಗುಹಾಲಯಗಳು, ಶಿಲಾರಥಗಳು ಪಲ್ಲವ ಕಲಾಶೈಲಿಯ ಉಚ್ಛ್ರಾಯ ಸ್ಥಿತಿಯನ್ನು ಮೆರೆದುವು. ಮಹಾಬಲಿಪುರವನ್ನು ಇವನು ತನ್ನ ಬಿರುದಿನ ಸಂಕೇತವಾಗಿ ಮಾಮಲ್ಲಪುರಂ ಎಂದು ಕರೆದ.

ನರಸಿಂಹವರ್ಮನ ಅನಂತರ ಅವನ ಮಗ ಇಮ್ಮಡಿ ಮಹೇಂದ್ರವರ್ಮ ಅಧಿಕಾರಕ್ಕೆ ಬಂದ. ಅವನು ಎರಡು ವರ್ಷಗಳ ಕಾಲ ಮಾತ್ರ (668-670) ಆಳಿದ. 70ರಲ್ಲಿ 2ನೆಯ ಮಹೇಂದ್ರವರ್ಮನ ಮಗ 1ನೆಯ ಪರಮೇಶ್ವರವರ್ಮ ಪಲ್ಲವ ಗದ್ದುಗೆ ಏರಿದ. ಈ ರಾಜರ ಕಾಲದಲ್ಲಿ ಮತ್ತೆ ಚಾಳುಕ್ಯ-ಪಲ್ಲವ ದ್ವೇಷ ಮುಂದುವರಿಯಿತು. ಚಾಳುಕ್ಯ-ಪಲ್ಲವ ದ್ವೇಷ ಮುಂದುವರಿಯಿತು. ಚಾಳುಕ್ಯ ದೊರೆ 1ನೆಯ ವಿಕ್ರಮಾದಿತ್ಯ ಪಾಂಡ್ಯದೊರೆ ಅರಿಕೇಸರಿ ಪರಾಂಕುಶ ಮಾರವರ್ಮನ ಸಹಾಯ ಪಡೆದು 1ನೆಯ ಪರಮೇಶ್ವರವರ್ಮನ ಮೇಲೆ ಯುದ್ಧ ಘೋಷಿಸಿದ. ಪಲ್ಲವ ದೊರೆ ಸೋತು 1ನೆಯ ವಿಕ್ರಮಾದಿತ್ಯನಿಗೆ ಕಪ್ಪಕಾಣಿಕೆ ನೀಡಿದ. ಆದರೆ ಈ ಹೋರಾಟದಲ್ಲಿ ಪಲ್ಲವರು ಜಯಶೀಲರಾದರೆಂದು ಪಲ್ಲವ ಗ್ರಂಥಗಳಲ್ಲಿ ಹೇಳಲಾಗಿದೆ. ಪೆರುವಲ ನಲ್ಲೂರು (ತಿರುಚಿರಪಲ್ಲಿ ಜಿಲ್ಲೆಯ ಲಾಲ್ಗುಡಿ ಬಳಿ) ಕದನದಲ್ಲಿ ವಿಕ್ರಮಾದಿತ್ಯನ ಸೈನ್ಯವನ್ನು ಸೋಲಿಸಿದ್ದಾಗಿ ಪರಮೇಶ್ವರ ವರ್ಮ ಹೇಳಿಕೊಂಡಿದ್ದಾನೆ. ಪರಮೇಶ್ವರವರ್ಮ ಶೈವಮತಾವಲಂಬಿಯಾಗಿದ್ದ. ಇವನು ಕಂಚಿಯ ಬಳಿಯ ಕುರಂನಲ್ಲಿ ಶಿವಾಲಯವೊಂದನ್ನು ನಿರ್ಮಿಸಿದ. ಮಹಾಬಲಿಪುರದ ಗಣೇಶರಥವನ್ನು ಕೊರೆಯಿಸಿದವನು, ಇವನೇ.

ಒಂದನೆಯ ಪರಮೇಶ್ವರವರ್ಮನ ಅನಂತರ ಅವನ ಮಗ 2ನೆಯ ನರಸಿಂಹವರ್ಮ ರಾಜಸಿಂಹ ಸಿಂಹಾಸನವೇರಿದ. ಇವನ ಕಾಲದಲ್ಲಿ ಪಲ್ಲವ ರಾಜ್ಯ ಹೊರಗಿನ ಆಕ್ರಮಣದಿಂದ ಮುಕ್ತವಾಗಿತ್ತು. ರಾಜ್ಯದಲ್ಲಿ ಶಾಂತಿ ನೆಮ್ಮದಿಗಳು ನೆಲಸಿ, ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ದುಡಿಯಲು 2ನೆಯ ನರಸಿಂಹವರ್ಮನಿಗೆ ಹೆಚ್ಚು ಅವಕಾಶ ಸಿಕ್ಕಿತು. ಇವನು ಕಲೆ ಮತ್ತು ಸಾಹಿತ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದ. ಅವುಗಳಲ್ಲಿ ಪ್ರಮುಖವಾದವೆಂದರೆ ಕಂಚಿಯ ಕೈಲಾಸನಾಥನ ಐರಾವತೇಶ್ವರನ ಮತ್ತು ಪನಮಲೆಯ ಶಿವನ ದೇವಾಲಯಗಳು. ವಿವಿಧ ಅಭಿರುಚಿಗಳ ವ್ಯಕ್ತಿಯಾಗಿದ್ದ ನರಸಿಂಹವರ್ಮ ಶಂಕರ ಭಕ್ತ, ಆಗಮಪ್ರಿಯ, ಶ್ರೀವಾದ್ಯವಿದ್ಯಾಧರ ಮುಂತಾದ ಬಿರುದುಗಳನ್ನು ಹೊಂದಿದ್ದ. ನರಸಿಂಹವರ್ಮ ಚೀನಕ್ಕೆ ರಾಯಭಾರಿಯೊಬ್ಬನನ್ನು ಕಳುಹಿಸಿದ್ದನೆಂದು ನಂಬಲಾಗಿದೆ.

ಇಮ್ಮಡಿ ನರಸಿಂಹವರ್ಮನ ಮರಣದ ಅನಂತರ ಅವನ ಮಗ ಇಮ್ಮಡಿ ಪರಮೇಶ್ವರವರ್ಮ ಸಿಂಹಾಸನಕ್ಕೆ ಬಂದ. ಇವನು ತನ್ನ ಆಳ್ವಿಕೆಯ ಕೊನೆಯಲ್ಲಿ ಚಾಳುಕ್ಯ ಯುವರಾಜ ಇಮ್ಮಡಿ ವಿಕ್ರಮಾದಿತ್ಯನೊಡನೆ ಸೆಣಸಬೇಕಾಯಿತು. ಗಂಗದೊರೆ ಶ್ರೀಪುರಷನ ಪುತ್ರ ಎರೆಯಪ್ಪನ ನೆರವಿನಿಂದ ಇಮ್ಮಡಿ ವಿಕ್ರಮಾದಿತ್ಯ ಪಲ್ಲವ ರಾಜಧಾನಿಯ ಮೇಲೆ ದಾಳಿ ನಡೆಸಿದೆ. ಇಮ್ಮಡಿ ಪರಮೇಶ್ವರವರ್ಮ ಸೋತು ಅಪಾರ ಯುದ್ಧಪರಿಹಾರ ದಂಡವನ್ನು ನೀಡಿ ಚಾಳುಕ್ಯರೊಡನೆ ಒಪ್ಪಂದ ಮಾಡಿ ಕೊಂಡ ಶ್ರೀಪುರಷನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ವಿಫಲವಾದ ಮೇಲೆ ವಿಳಂದೆ ಕದನದಲ್ಲಿ ಗಂಗಾರಾಜನಿಂದ ಇಮ್ಮಡಿ ಪರಮೇಶ್ವರವರ್ಮ ಸಾವಿಗೆ ಈಡಾದ.

ಇಮ್ಮಡಿ ನಂದಿವರ್ಮ ಪಲ್ಲವಮಲ್ಲ: 730-800. ಇಮ್ಮಡಿ ಪರಮೇಶ್ವರ ವರ್ಮನ ಮರಣಾನಂತರ 2ನೆಯ ನಂದಿವರ್ಮ ಪಲ್ಲವಮಲ್ಲ ರಾಜನಾದ. ಇವನು ಪ್ರಜೆಗಳಿಂದ ಮರಣಾನಂತರ 2ನೆಯ ನಂದಿವರ್ಮ ಪಲ್ಲವಮಲ್ಲ ರಾಜನಾದ. ಇವನು ಪ್ರಜೆಗಳಿಂದ ಚುನಾಯಿತನಾದವನೆಂದು ಕೆಲವರೂ ಪಲ್ಲವಸಿಂಹಾಸನವನ್ನು ದುರಾಕ್ರಮಣದಿಂದ ಪಡೆದುಕೊಂಡನೆಂದು ಮತ್ತೆ ಕೆಲವರೂ ಅಭಿಪ್ರಾಯಪಟ್ಟಿದ್ದಾರೆ. ಇಮ್ಮಡಿ ಪರಮೇಶ್ವರವರ್ಮನ ಸಾವಿನ ಸಮಯದಲ್ಲಿ ಅವನ ಮಗ ಚಿತ್ರಮಾಯ ಇನ್ನೂ ಚಿಕ್ಕವನಾಗಿದ್ದ. ಆದ್ದರಿಂದ ಸಿಂಹವಿಷ್ಣುವಿನ ಸೋದರ ಭೀಮವರ್ಮನ ವಂಶಕ್ಕೆ ಸೇರಿದ ಇಮ್ಮಡಿ ನಂದಿವರ್ಮನ ಪಲ್ಲವಮಲ್ಲನನ್ನು ಅರಮನೆಯ ಪಂಡಿತರು. ಅಧಿಕಾರಿಗಳು ಮತ್ತು ಪ್ರಜೆಗಳು ರಾಜನಾಗಿ ಚುನಾಯಿಸಿದರೆಂದು ಕಂಚಿಯ ವೈಕುಂಠ ಪೆರುಮಾಳ್ ದೇವಾಲಯದ ಶಾಸನವೊಂದು ತಿಳಿಸುತ್ತದೆ.

ಇಮ್ಮಡಿ ನಂದಿವರ್ಮನ ಆಳ್ವಿಕೆ ಪ್ರಮುಖ ಘಟನೆಗಳಿಂದ ಕೂಡಿತ್ತು. ಪಲ್ಲವ, ಪಾಂಡ್ಯ ಮತು ಚಾಳುಕ್ಯ ಶಾಸನಗಳು ನಂದಿವರ್ಮನ ವಿವಿಧ ಬಗೆಯ ಸಾಧನೆಗಳು ಬಗ್ಗೆ ಹೆಚ್ಚು ಬೆಳಕನ್ನು ಚೆಲ್ಲಿವೆ. 740ರ ವೇಳೆಗೆ ಚಾಳುಕ್ಯ ದೊರೆ ಇಮ್ಮಡಿ ವಿಕ್ರಮಾದಿತ್ಯ ಕಂಚಿಯ ಮೇಲೆ ಆಕ್ರಮಣ ನಡೆಸಿ ಪಲ್ಲವ ದೊರೆಯನ್ನು ಸೋಲಿಸಿ. ರಾಜಧಾನಿ ಕಂಚಿಯನ್ನು ವಶಪಡಿಸಿಕೊಂಡ. ಆದರೆ ಇಮ್ಮಡಿ ವಿಕ್ರಮಾದಿತ್ಯ ಆ ರಾಜಧಾನಿಯನ್ನು ಕೊಳ್ಳೆ ಹೊಡೆಯುವ ಬದಲು ಅಲ್ಲಿಯ ಕೈಲಾಸನಾಥ ದೇವಾಲಯಕ್ಕೆ ಅಮೂಲ್ಯ ರತ್ನಾಭರಣಗಳನ್ನು ನೀಡಿ ಅನೇಕ ದತ್ತಿಗಳನ್ನು ಬಿಟ್ಟ. ಅಲ್ಲದೆ. ಕೈಲಾಸನಾಥ ದೇವಾಲಯದ ಕಂಬವೊಂದರ ಮೇಲೆ ಕನ್ನಡದಲ್ಲಿ ಶಾಸನ ಕೆತ್ತಿಸಿದ. ಅವನು ನಂದಿವರ್ಮನಿಂದ ಆನೆಗಳು ಮತ್ತು ಕಪ್ಪಕಾಣಿಕೆಗಳನ್ನು ಪಡೆದು ತನ್ನ ರಾಜಧಾನಿಗೆ ಹಿಂದಿರುಗಿದ. ಇಮ್ಮಡಿ ವಿಕ್ರಮಾದಿತ್ಯ ತನ್ನ ಆಳ್ವಿಕೆಯ ಕೊನೆಯಲ್ಲಿ ತನ್ನ ಮಗ ಕೀರ್ತಿವರ್ಮನ ನೇತೃತ್ವದಲ್ಲಿ ಕಂಚಿಯ ಆಕ್ರಮಣಕ್ಕೆ ಮತ್ತೆ ಸೈನ್ಯವನ್ನು ಕಳಹಿಸಿದ. ಕೀರ್ತಿವರ್ಮ ಜಯಶೀಲನಾಗಿ ಅಪಾರ ಆಭರಣಗಳೊಡನೆ ಚಾಳುಕ್ಯ ರಾಜಧಾನಿಗೆ ಮರಳಿದ.

ಇಮ್ಮಡಿ ನಂದಿವರ್ಮನ ಕಾಲದಲ್ಲಿ ಪಲ್ಲವರಿಗೂ ಪಾಂಡ್ಯರಿಗೂ ಯುದ್ಧಗಳಾದುವು. ಪಾಂಡ್ಯರು ಸ್ವತಂತ್ರರಾಗಲು ಬಯಸಿ ಚಿತ್ರಮಾಯನ ಹಕ್ಕುಗಳನ್ನು ಎತ್ತಿಹಿಡಿದು ಇಮ್ಮಡಿ ನಂದಿವರ್ಮನ ವಿರುದ್ಧ ಒಂದು ಸೈನಿಕ ಒಕ್ಕೂಟ ರಚಿಸಿ ದಾಳಿ ನಡೆಸಿದರು. ಪಾಂಡ್ಯ ದೊರೆ 1ನೆಯ ರಾಜಸಿಂಹ ತಂಜಾವೂರಿನ ಸುತ್ತಮುತ್ತಲಲ್ಲಿ ಇಮ್ಮಡಿ ನಂದಿವರ್ಮ ಪಲ್ಲವಮಲ್ಲನ ವಿರುದ್ಧ ಅನೇಕ ಕದನಗಳಲ್ಲಿ ವಿಜಯಿಯಾದನೆಂದು ಹೇಳಲಾಗಿದೆ. ಕುಂಭಕೋಣಂ ಬಳಿಯ ನಂದಿಪುರದ ಸಮೀಪದಲ್ಲಿ ನಂದಿವರ್ಮನನ್ನು ಪಾಂಡ್ಯಸೇನೆಗಳು ಸುತ್ತುಗಟ್ಟಿದುವು. ಆದರೆ ನಂದಿವರ್ಮನ ಸೇನಾಧಿಪತಿ ಉದಯಚಂದ್ರ ವೀರಾವೇಶದಿಂದ ಹೋರಾಡಿ ಪಾಂಡ್ಯ ದೊರೆಯನ್ನು ಪರಾಭವಗೊಳಿಸಿದನಲ್ಲದೆ. ಚಿತ್ರಮಾಯವನ್ನು ಸಂಹರಿಸಿದ.

ರಾಷ್ಟ್ರಕೂಟರೂ ಪಲ್ಲವರ ಪ್ರಭಾವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದರು. ರಾಷ್ಟ್ರಕೂಟ ಪ್ರಭುತ್ವದ ಸಂಸ್ಥಾಪಕನಾದ ದಂತಿದುರ್ಗ ಕಂಚಿಯ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡ. ಆದರೆ ದಂತಿದುರ್ಗ ತನ್ನ ಪುತ್ರಿ ರೇವಳನ್ನು ಇಮ್ಮಡಿ ನಂದಿವರ್ಮನಿಗೆ ವಿವಾಹ ಮಾಡಿಕೊಟ್ಟು ಅವನೊಡನೆ ಶಾಂತಿ ಒಪ್ಪಂದಕ್ಕೆ ಸಮ್ಮತಿಸಿ, ರಾಷ್ಟ್ರಕೂಟ ರಾಜ್ಯಕ್ಕೆ ಹಿಂದಿರುಗಿದ. ರೇವಳು ದಂತಿವರ್ಮ ಪಲ್ಲವನಿಗೆ ಜನ್ಮವಿತ್ತಳು. ತಲಕಾಡಿನ ಗಂಗರಿಗೂ ಇಮ್ಮಡಿ ನಂದಿವರ್ಮನಿಗೂ ಯುದ್ಧಗಳು ನಡೆದುವು. ಪಲ್ಲವರ ಮೇಲೆ ಗಂಗದೊರೆ ಶ್ರೀಪುರುಷ ಜಯಗಳಿಸಿದನೆಂದು ಗಂಗರ ಶಾಸನಗಳು ತಿಳಿಸುತ್ತವೆ. ಆದರೆ ಗಂಗದೊರೆಯನ್ನು ನಂದಿವರ್ಮ ಸೋಲಿಸಿ ಅವನಿಂದ ಪ್ರಸಿದ್ಧ ಕಂಠಾಭರಣವೊಂದನ್ನು ಕಸಿದುಕೊಂಡನೆಂದು ಪಲ್ಲವ ದಾಖಲೆಗಳು ತಿಳಿಸುತ್ತವೆ.
ಇಮ್ಮಡಿ ನಂದಿವರ್ಮನ ವಿಷ್ಣುವಿನ ಪರಮಭಕ್ತನಾಗಿದ್ದನಲ್ಲದೆ ವಿದ್ವಾಂಸನೂ ಆಗಿದ್ದ. ಇವನು ವಿದ್ವನ್ಮಣಿಗಳಿಗೆ ಆಶ್ರಯ ನೀಡಿದ. ವಿಷ್ಣುಭಕ್ತರೂ ವಿದ್ವಾಂಸರೂ ಆಗಿದ್ದ. ತಿರುಮಂಗೈ ಆಳ್ವಾರರು ಇಮ್ಮಡಿ ನಂದಿವರ್ಮನ ಸಮಕಾಲೀನರು. ಕಲೆಗೆ ಪ್ರೊತ್ಸಾಹ ನೀಡುತ್ತಿದ್ದ. ಇಮ್ಮಡಿ ನಂದಿವರ್ಮ ಕಂಚಿಯ ಮುಕ್ತೇಶ್ವರ ಮತ್ತು ಕೂರಮ್‍ನ ಕೇಶವ ಪೆರುಮಾಳ್ ದೇವಾಯಲಗಳನ್ನು ನಿರ್ಮಿಸಿದ. ಕಂಚಿಯ ಮತ್ತೊಂದು ಪ್ರಸಿದ್ದ ದೇವಾಲಯವಾದ ವೈಕುಂಠ ಪೆರುಮಾಳ್ ದೇವಾಲಯವನ್ನೂ ಇವನೇ ನಿರ್ಮಿಸಿದನೆಂದು ಕೆಲವರ ಅಭಿಪ್ರಾಯ.

ಇಮ್ಮಡಿ ನಂದಿವರ್ಮನ ತರುವಾಯ ಅವನ ಮಗ ದಂತಿವರ್ಮ ಸಿಂಹಾಸನ ವೇರಿದ. ರಾಷ್ಟ್ರಕೂಟ ವಂಶದೊಡನೆ ಇವನ ರಕ್ತಸಂಬಂಧವಿದ್ದಾಗ್ಯೂ ರಾಷ್ಟ್ರಕೂಟ ರಾಜರಾದ ಧ್ರುವ ಮತ್ತು ಮುಮ್ಮಡಿ ಗೋವಿಂದ ಸೋಲಿಸಿ ಅವನಿಂದ ಅಪಾರ ಕಪ್ಪಕಾಣಿಕೆ ಪಡೆದುಕೊಂಡ. ಪಾಂಡ್ಯರೂ ದಂತಿವರ್ಮನಿಂದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು. ದಂತಿವರ್ವ ಕಲಾಪೋಷಕನಾಗಿದ್ದ. ಮದರಾಸಿನ ತಿರುವಲ್ಲಿಕ್ಕೇಣಿಯ ಪಾರ್ಥಸಾರಥಿ ದೇವಾಲಯವನ್ನು ದಂತಿವರ್ಮ ಕಟ್ಟಿಸಿದನೆಂದು ಅಲ್ಲಿರುವ ಒಂದು ತಮಿಳು ಶಾಸನದಿಂದ ತಿಳಿದುಬರುತ್ತದೆ.

ದಂತಿವರ್ಮನ ಅನಂತರ ಅವನ ಮಗ 3ನೆಯ ನಂದಿವರ್ಮ ಪಟ್ಟಕ್ಕೆ ಬಂದ. ಇವನು ಸಮರ್ಥ ಯೋಧ. ಕ್ಷೀಣಿಸುತ್ತಿದ್ದ ಪಲ್ಲವ ಪ್ರಭುತ್ವವನ್ನು ಎತ್ತಿಹಿಡಿಯಲು ಶ್ರಮಿಸಿದ. ಈತ ಪಾಂಡ್ಯ ದೊರೆ ಶ್ರೀಮಾರನನ್ನು ತೆಲ್ಲಾರು ಕದನದಲ್ಲಿ ಸೋಲಿಸಿದ. ಕಂಚಿ, ಮಹಾಬಲಿಪುರ, ಮಯಿಲೈ (ಮೈಲಾಪುರ) ಇವು ಪ್ರಮುಖ ರಾಜಕೀಯ ಕೇಂದ್ರಗಳಾಗಿದ್ದುವೆಂದು ತಿಳಿದುಬರುತ್ತದೆ. ಶೈವಧರ್ಮ ಮತ್ತು ತಮಿಳು ಸಾಹಿತ್ಯಕ್ಕೆ ಇವನು ವಿಶೇಷ ಪ್ರೋತ್ಸಾಹ ನೀಡಿದ. ಪೆರುಂದೇವನಾರ್ ಎಂಬ ತಮಿಳು ಕವಿ ಇವನ ಸಮಕಾಲೀನನಾಗಿದ್ದ. ನಂದಿವರ್ಮನ ಬಳಿ ಒಂದು ನೌಕಾಸೈನ್ಯವಿತ್ತೆಂದು ಸಮುದ್ರದಾಚೆಯ ವ್ಯಾಪಾರದಲ್ಲಿ ಇವನು ಆಸಕ್ತಿ ತಾಳಿದ್ದನೆಂದೂ ಸಯಾಮ್‍ನಲ್ಲಿ ದೊರೆತಿರುವ ತಮಿಳು ಶಾಸನವೊಂದು ತಿಳಿಸುತ್ತದೆ.

ಮೂರನೆಯ ನಂದಿವರ್ಮನ ಮರಣಾನಂತರ ಅವನ ಮಗ ನೃಪತುಂಗವರ್ಮ ಸಿಂಹಾಸನಕ್ಕೆ ಬಂದ. ನೃಪತುಂಗವರ್ಮ ಚೋಳ, ಪಾಂಡ್ಯ ಮತ್ತು ಗಂಗದೊರೆಗಳನ್ನು ಸೋಲಿಸಿದ್ದಾಗಿ ತನ್ನ ಶಾಸನಗಳಲ್ಲಿ ಹೇಳಿಕೊಂಡಿದ್ದಾನೆ. ಅದಾಗ್ಯೂ ಇವನ ಕಾಲದಲ್ಲಿ ಪಲ್ಲವರ ಅಧಿಕಾರ ಪ್ರಾಬಲ್ಯಗಳು ಕುಂದಿ, ಚೋಳ ಮತ್ತು ಪಾಂಡ್ಯರು ತಲೆ ಎತ್ತಿದರು. ನೃಪತುಂಗ ವರ್ಮನ ಮಂತ್ರಿಯೊಬ್ಬ ವೇದ ಮತ್ತು ಧರ್ಮಶಾಸ್ತ್ರಗಳ ಅಧ್ಯಯನಕ್ಕೆಂದು ಸ್ಥಾಪಿತವಾಗಿದ್ದ ಸಂಸ್ಥೆಯೊಂದರ ಪೋಷಣೆಗಾಗಿ ಮೂರು ಹಳ್ಳಿಗಳನ್ನು ದತ್ತಿಬಿಟ್ಟ ವಿಷಯವನ್ನು ನೃಪತುಂಗವರ್ಮನ ಮಗ ಹಾಗೂ ಉತ್ತರಾಧಿಕಾರಿ ಅಪರಾಜಿತ ವರ್ಮ ಇವನು ಪಲ್ಲವ ವಂಶದ ಕೊನೆಯ ಅರಸು. ಅಪರಾಜಿತವರ್ಮ ಕುಂಭಕೋಣಂ ಬಳಿಯ ಶ್ರೀಪುರಂಬಿಯಂ ಎಂಬಲ್ಲಿ ಪಾಂಡ್ಯ ದೊರೆ ಇಮ್ಮಡಿ ವರಗುಣವನ್ನು ಸೋಲಿಸಿದ. ಇವನ ಕಾಲದಲ್ಲಿ ಚೋಳರಿಗೂ ಪಲ್ಲವರಿಗೂ ಅನೇಕ ಯುದ್ಧಗಳಾದುವು. ವಿಜಯಾಲಯ ಚೋಳನ ನಾಯಕತ್ವದಲ್ಲಿ ಪ್ರಬಲರಾಗುತ್ತಿದ್ದ. ಚೋಳರು ಪಲ್ಲವರನ್ನು ನಾಶಪಡಿಸಲು ಹವಣಿಸುತ್ತಿದ್ದರು. ತಿರುವೊಲಂಕಾಡು ಕದನದಲ್ಲಿ (890) ಅಪರಾಜಿತ ವರ್ಮನನ್ನು ವಿಜಯಾಲಯ ಮತ್ತು ಅವನ ಮಗ 1 ನೆಯ ಆದಿತ್ಯ ಸಂಪೂರ್ಣವಾಗಿ ಸೋಲಿಸಿ ಪಲ್ಲವರ ಅಧಿಕಾರವನ್ನು ಕೊನೆಗೊಳಿಸಿದರು. ಇದರಿಂದಾಗಿ ಪಲ್ಲವರು ತೊಂಡೈಮಂಡಲ ನಾಡಿನ ತಮ್ಮ ಆಧಿಪತ್ಯವನ್ನು ಕಳೆದುಕೊಂಡರು. ಅಪರಾಜಿತ ವರ್ಮನ ಅವಸಾನದೊಡನೆ ಪಲ್ಲವರ ಸ್ವತಂತ್ರ ಆಳ್ವಿಕೆ ಕೊನೆಗೊಂಡಿತು. ಹನ್ನೆರಡನೆಯ ಶತಮಾನದ ವರೆಗೂ ಪಲ್ಲವರು ಚೋಳರ ಸಾಮಂತರಾಗಿ, ಚೋಳ ಸಾಮ್ರಾಜ್ಯದ ಅಧಿಕಾರಿಗಳಾಗಿದ್ದರು. ಪಲ್ಲವರ ಸಂತತಿ ಮತ್ತು ರಾಜಕೀಯ ಪ್ರಾಬಲ್ಯ ಆಳಿದ ಮೇಲೆ ಚೋಳರು ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಪ್ರಧಾನ ಪಾತ್ರ ವಹಿಸಿದರು.						(ಜಿ.ಎಂ.ಎ.ಸ್.)

ವಾಸ್ತುಶಿಲ್ಪ
ಗುಹಾದೇವಾಲಯಗಳು : ಪಲ್ಲವ ದೊರೆಗಳ ಕಟ್ಟಡಗಳಾವುವೂ ಈವರೆಗೆ ದೊರಕಿಲ್ಲ. ಬೃಹತ್ ಪಲ್ಲವ ದೊರೆಗಳಲ್ಲಿ ಒಬ್ಬನಾದ 1ನೆಯ ಮಹೇಂದ್ರವರ್ಮ ತನ್ನ ಮಂಡಗಟ್ಟು ಶಾಸನದಲ್ಲಿ ತಿಳಿಸಿರುವಂತೆ ಆವರೆಗೆ ಇಟ್ಟಿಗೆ, ಮರ, ಗಾರೆಗಳಿಂದ ದೇವಾಲಯಗಳನ್ನು ನಿರ್ಮಿಸುತ್ತಿದ್ದುದರಿಂದ ಅವು ಹೆಚ್ಚು ಕಾಲ ಉಳಿದು ಬರುವುದು ಸಾಧ್ಯವಿರಲಿಲ್ಲ.

ಮಹೇಂದ್ರ ಶೈಲಿ: 1ನೆಯ ಮಹೇಂದ್ರವರ್ಮ (610-630) ದಕ್ಷಿಣ ಆರ್ಕಾಟು ಜಿಲ್ಲೆಯ ಮಂಡಗಪಟ್ಟು ಎಂಬಲ್ಲಿ ತಮಿಳು ನಾಡಿನಲ್ಲಿ ಮೊಟ್ಟಮೊದಲಿಗೆ ಕಲ್ಲುಬಂಡೆಯಲ್ಲಿ ಕೊರೆದು ಬ್ರಹ್ಮ ವಿಷ್ಣು ಶಿವರಿಗೆ ಒಂದು ಆಲಯವನ್ನು ನಿರ್ಮಿಸಿದ. ಅನಂತರ ಪಲ್ಲಾವರಮ್ ಮತ್ತು ವಲ್ಲಮ್ (ಚೆಂಗಲ್ಪಟ್ಟು ಜಿಲ್ಲೆ), ಮಾಮಂಡೂರು, ಮಹೇಂದ್ರವಾಡಿ ಮತ್ತು ಸೀಯಮಂಗಲಮ್ (ಉತ್ತರ ಆರ್ಕಾಟು ಜಿಲ್ಲೆ), ದಳವಾ ನೂರು (ದಕ್ಷಿಣ ಆರ್ಕಾಟು ಜಿಲ್ಲೆ) ಮತ್ತು ತಿರುಚ್ಚಿರಾಪಳ್ಳಿಯಲ್ಲಿ ಗುಹಾದೇವಾಲಯಗಳನು ಕೊರೆಯಿಸಿದ. ಇವಲ್ಲದೆ ಕುರಂಗನಿಲ್‍ಮುಟ್ಟಮ್, ವಿಳಪ್ಪಾಕ್ಕಮ್ ಎಂಬಲ್ಲಿಯ ಗುಹೆಗಳಲ್ಲಿ ಶಾಸನಗಳಿದ್ದರೂ ಅವನ್ನು ಮಹೇಂದ್ರವರ್ಮನ ಕೃತಿಗಳೆಂದು ಪರಿಗಣಿಸಬಹುದು. ಅವುಗಳಲ್ಲಿ ಕೆಲವು ಶಿವನಿಗೂ ಮತ್ತೆ ಕೆಲವು ವಿಷ್ಣುವಿಗೂ ಅರ್ಪಿತವಾಗಿವೆ. ಈ ಮೊದಲ ಗುಹಾ ದೇವಾಲಯಗಳಲ್ಲಿ ಸಾಮಾನ್ಯವಾಗಿ ಆಯಾಕಾರದ ಮಂಟಪ. ಅದರ ಮುಂಭಾಗದಲ್ಲಿ ಸ್ಥೂಲವಾಗಿದ್ದ ಗಿಡ್ಡನೆಯ ಕಂಬಗಳು ಮತ್ತು ಅರಗಂಬಗಳು ಇರುತ್ತಿದ್ದುವು. ಕಂಬಗಳು ಚದರವಾಗಿದ್ದರೂ ಕೆಲವು ಬಾರಿ ಅವುಗಳ ಮಧ್ಯಭಾಗದಲ್ಲಿ ಅಷ್ಟಮುಖಗಳಿದ್ದುವು. ಅವು ಭಾರವಾದ ಮುನ್ ಚಾಚಿದ ಅಡ್ಡ ದಿಮ್ಮಿಗಳಿಗೆ ಆಧಾರವಾಗಿರುತ್ತಿದ್ದವು. ಅಡ್ಡದಿಮ್ಮಿಗಳ ಮೇಲೆ ತರಂಗಪಟ್ಟಿಕೆಗಳ ಅಲಂಕರಣವಿರುತ್ತಿತ್ತು. ಕೆಲವು ಬಾರಿ ಮಂಟಪದ ಮಧ್ಯಭಾಗದ ಕಂಬಗಳ ಸಾಲಿನಿಂದ ಅದು ಮುಖಮಂಟಪ ಮತ್ತು ಅರ್ಧಮಂಟಪಗಳೆಂದು ಎರಡು ಭಾಗಗಳಾಗಿರುತ್ತಿತ್ತು. ಮತ್ತೆ ಕೆಲವು ಬಾರಿ ಕಂಬಗಳಿಲ್ಲದಿದ್ದರೂ ನೆಲಗಟ್ಟಿನಲ್ಲಿ ಮುಂಭಾಗಕ್ಕಿಂತ ಹಿಂಭಾಗ ಸ್ವಲ್ಪ ಎತ್ತರವಿದ್ದು ಈ ಭಾಗಗಳನ್ನು ಸೂಚಿಸುತ್ತಿತ್ತು. ಹಿಂಭಾಗದ ಕೆಲವು ಬಾರಿ ಪಕ್ಕದ, ಗೋಡೆಯಲ್ಲಿ ಕೆತ್ತಿದ ಗೂಡನ್ನು ಗರ್ಭಗುಡಿಯಂತೆ ಬಳಸಲಾಗುತ್ತಿತ್ತು. ಗರ್ಭಗುಡಿಯ ಮುಂದೆ ಕಲ್ಲಿನಲ್ಲಿ ಕೆತ್ತಿದ 2-3 ಮೆಟ್ಟಲುಗಳಿರುತ್ತಿದ್ದುವು. ಗರ್ಭಗುಡಿಯ ಇಕ್ಕೆಲಗಳಲ್ಲಿ ದ್ವಾರಪಾಲಕ ಶಿಲ್ಪಗಳಿರುತ್ತಿದ್ದುವು. ಮಂಡಗಪಟ್ಟುವಿನ ಗುಹೆಯಂಥ ಮೂರು ದೇವತೆಗಳಿಗೆ ಅರ್ಪಿತವಾದ ಗುಹೆಯ ಮುಂಗೋಡೆಯ ಮೇಲೆ ದ್ವಾರಪಾಲಕ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಶೈಲಿಯ ಗುಹಾದೇವಾಲಯಗಳನ್ನು 610-700ರ ನಡುವೆ ನಿರ್ಮಿಸಲಾಗಿತ್ತಿತ್ತು. ಮಹೇಂದ್ರವರ್ಮನ ಉತ್ತರಾಧಿಗಳ ಕಾಲದಲ್ಲಿ ಚೆಂಗಲ್ಪಟ್ಟು ಜಿಲ್ಲೆಯ ತಿರುಕ್ಕುಳಕುನ್ರಮ್, ಮಹಾಬಲಿಪುರದ ಕೋಟೆಕ್ಕಾಲ್ ಮಂಟಪಮ್, ಧರ್ಮರಾಜ ಮಂಟಪಮ್, ಸಿಂಗ ಪೆರುಮಾಳ್ ಕೋವಿಲಿನ ನರಸಿಂಹ ಗುಹೆ, ದಕ್ಷಿಣ ಆರ್ಕಾಟು ಜಿಲ್ಲೆಯ ಸಿಂಗವರಮ್‍ನ ರಂಗನಾಥ ಗುಹಾಲಯಗಳನ್ನು ಈ ಶೈಲಿಗೆ ಸೇರಿಸಬಹುದು. ಮಹಾಬಲಿಪುರದ ಬಳಿಯಿರುವ ಸಾಲುವನ್ ಕುಪ್ಪಮ್‍ನಲ್ಲಿರುವ ಅತಿರಣಚಂಡ ಈ ಶೈಲಿಯ ಕೊನೆಯ ನಿದರ್ಶನ.
ಮಾಮಲ್ಲ ಶೈಲಿ: ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ (630-668) ಮಹೇಂದ್ರ ಶೈಲಿಯ ಕೆಲವು ಗುಹಾಲಯಗಳನ್ನು ಕೊರೆಸಿದರೂ ಸುಧಾರಿತ ಶೈಲಿಯ ಗುಹಾದೇವಾಲಯಗಳ ನಿರ್ಮಾಣ ಪ್ರಾರಂಭಿಸಿದ. ಈ ಶೈಲಿಯ ಗುಹಾಲಯಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿತ್ತು. ಅವನು ಪ್ರಾರಂಭಿಸಿದ ಕೆಲವು ಗುಹೆಗಳನ್ನು ಅವನ ಉತ್ತರಾಧಿಕಾರಿಗಳು ಪೂರ್ಣಗೊಳಿಸಿದರು. ಈ ಶೈಲಿಯ ನಿರ್ಮಾಣಗಳೆಲ್ಲ ಮಹಾಬಲಿಪುರದಲ್ಲಿವೆ. ಈ ಶೈಲಿಯ ಗುಹಾಲಯಗಳಲ್ಲಿ ಕಾಣುವ ಪ್ರಗತಿಪರ ಲಕ್ಷಣಗಳು ಹೀಗಿವೆ: ಗುಹಾಲಯಗಳ ಮುಂಭಾಗ ಹಾಗೂ ಒಳಭಾಗಗಳ ವಾಸ್ತುಲಕ್ಷಣಗಳನ್ನು ಆ ಕಾಲದ ಕಟ್ಟಡ ದೇವಾಲಯಗಳ ಮಾದರಿಯಲ್ಲಿ ವಿವರವಾಗಿ ರೂಪಿಸಲಾಗಿದೆ. ಮಹೇಂದ್ರ ಶೈಲಿಯ ಮಂಟಪಗಳ ಮುಂಭಾಗದ ತಲೆಕಟ್ಟಡವನ್ನು ಅಡ್ಡತೊಲೆ ಮತ್ತು ಒರಟಾದ ಸೂರುಗಳಿಂದ ರೂಪಿಸುತ್ತಿದ್ದರೆ, ಮಾಮಲ್ಲ ಶೈಲಿಯಲ್ಲಿ ಮುಂಭಾಗದ ಮೇಲೆ ಬಾಗಿದ ಕಪೋತಗಳಲ್ಲಿ ಸಾಲಾಗಿ ಸಣ್ಣ ಗುಡಿಗಳನ್ನು ಹೋಲುವ ಆಯಾಕಾರದ ಕೂಡುಗಳ ಅಲಂಕರಣವನ್ನು ಮಾಡಲಾಗುತ್ತಿತ್ತು. ಈ ಕೂಡುಗಳ ಚಾವಣಿ ಅರ್ಧ ಉರುಳೆಯಾಕಾರವಾಗಿತ್ತು ಅವನ್ನು ಸೇರಿಸುವ ಹಾದಿಗಳಿರುತ್ತಿದ್ದುವು. ಅವುಗಳ ಕಂಬಗಳು ಮರದ ಕಂಬಗಳಂತೆ ಕೃಶಾಂಗವಾಗಿದ್ದು ಅವುಗಳ ತಳಭಾಗ ಮುಂಗಾಲಿನ ಮೇಲೆ ಕುಳಿತ ಸಿಂಹ ಅಥವಾ ವ್ಯಾಳದ ಆಕಾರದಲ್ಲಿರುತ್ತಿದ್ದುವು. ಮಂಟಪದ ಒಳಭಾಗವನ್ನು ಮುಖಮಂಟಪ ಮತ್ತು ಅರ್ಧಮಂಟಪಗಳಂತೆ ಕಂಬಗಳ ಸಾಲಿನಿಂದ ಇಬ್ಭಾಗಿಸಿ, ಹಿಂಬದಿಯ ಗರ್ಭಗುಡಿಯನ್ನು ಅರ್ಧ ಮಂಟಪದೊಳಕ್ಕೆ ಚಾಚಿಕೊಂಡಿರುವಂತೆ ನಿರ್ಮಿಸಲಾಗುತ್ತಿತ್ತು. ಗರ್ಭಗುಡಿಯ ಮುಂಭಾಗದಲ್ಲಿ ಅರಗಂಬಗಳನ್ನು ಕೊರೆದು ದ್ವಾರಪಾಲಕರಿಗೆ ಪ್ರತ್ಯೇಕ ಕೂಡಗಳನ್ನು ನಿರ್ಮಿಸಲಾಗುತ್ತಿತ್ತು. ಗರ್ಭಗುಡಿ ಮತ್ತು ದ್ವಾರಪಾಲಕ ಕೂಡುಗಳ ಮೇಲೂ ಬಾಗಿದ ಕೂಡುಗಳನ್ನು ಪ್ರಸ್ತರಗಳನ್ನು ನಿರ್ಮಿಸಲಾಗುತ್ತಿತ್ತು. ಮಾಮಲ್ಲ ಶೈಲಿಯ ಗುಹೆಗಳ ಗೋಡೆಗಳ ಮೇಲೆ ಎದ್ದು ಕಾಣುವ ದೇವದೇವಿಯರ ಉಬ್ಬುಶಿಲ್ಪಗಳ ಮತ್ತು ಶಿಲ್ಪಫಲಕಗಳ ಅಲಂಕರಣವಿರುತ್ತಿತ್ತು. ಪರಮೇಶ್ವರ ವರ್ಮ (670-700) ನಿರ್ಮಿಸಿದ ಗುಹಾಲಯಗಳ ಗರ್ಭಗುಡಿಯ ಹಿಂದಿನ ಗೋಡೆಯ ಮೇಲೆ ಸೋಮಾಸ್ಕಂಧ ಉಬ್ಬುಶಿಲ್ಪಗಳನ್ನು ಕಡೆಯಲಾಗಿದೆ. ಮಹಾಬಲಿಪುರದ ಕೊನೇರೆ ಮಂಟಪ, ಮಹಿಷಾಸುರಮರ್ದಿನಿ ಗುಹಾಲಯ, ವರಾಹ ಮಂಟಪ, ರಾಮಾನುಜ ಮಂಟಪ, ಮತ್ತು ಆದಿವರಾಹ ಮಂಟಪಗಳು ಅನುಕ್ರಮವಾಗಿ ಮಹೇಂದ್ರ ಶೈಲಿಯಿಂದ ಮಾಮಲ್ಲ ಶೈಲಿಗೆ ಮಾರ್ಪಾಟು ಹೊಂದುತ್ತಿರುವ ಹಂತಗಳನ್ನು ನಿರೂಪಿಸುತ್ತವೆ. ಪಂಚಪಾಂಡವ ಗುಹಾಲಯ ಈ ದಿಸೆಯಲ್ಲಿ ಅತ್ಯಂತ ಪ್ರಗತಿಪರವಾಗಿದೆ. ಹೆಚ್ಚು ಸುಧಾರಿತ ಮುಂಭಾಗ, ಸಿಂಹಪೀಠದ ತಳಭಾಗ ಇರುವ ಕಂಬಗಳ ಬೋದಿಗೆಯಲ್ಲಿ ನೆಗೆಯುತ್ತಿರುವ ಮತ್ತು ಕಪೋತವನ್ನು ಮುಟ್ಟುತ್ತಿರುವ ಸಿಂಹಗಳನ್ನು ರೂಪಿಸುವುದರ ಜೊತೆಗೆ, ಅದರ ಅರ್ಧಮಂಟಪದ ಒಳಭಾಗದಲ್ಲಿ ಪ್ರದಕ್ಷಿಣಮಾರ್ಗವಿರುವ ಪ್ರತ್ಯೇಕವಾದ ಗರ್ಭಗುಡಿಯನ್ನು ಕೊರೆಯುವ ಪ್ರಯತ್ನ ಮಾಡಲಾಗಿದೆ.

ಏಕಶಿಲಾ ದೇವಾಲಯಗಳು: ಇವು ಪಲ್ಲವ ವಾಸ್ತುಶಿಲ್ಪಕ್ಕೆ ನರಸಿಂಹವರ್ಮ ಮಾಮಲ್ಲ ನೀಡಿದ ಅಮೂಲ್ಯ ಕೊಡುಗೆಗಳು. ಇವನ್ನು ಸಾಮಾನ್ಯವಾಗಿ ಪಗೋಡ ಮತ್ತು ರಥಗಳೆಂದು ಕರೆಯುವುದುಂಟು. ಇವರ ಎಲ್ಲ ಏಕಶಿಲಾ ದೇವಾಲಯಗಳು ಮಹಾಬಲಿಪುರದಲ್ಲಿವೆ. ಬಹುಶಃ ಅಂಥ ವಾಸ್ತುನಿರ್ಮಾಣಕ್ಕೆ ಪಶ್ಚಿಮ ಭಾರತದ ಗುಹಾವಿಹಾರಗಳಲ್ಲಿರುವ ಸ್ತೂಪಗಳು ಪ್ರೇರಕ. ಸ್ತೂಪಗಳ ಹೊರಭಾಗವನ್ನು ಪ್ರತ್ಯೇಕ ವಾಸ್ತುಕೃತಿಯಾಗಿ ಕೊರೆದು ಅಲಂಕರಿಸಲಾಗಿತ್ತು; ಆದರೆ ಒಳಭಾಗವನ್ನು ಕೊರೆಯದೆ ಬಿಟ್ಟಿರುತ್ತಿತ್ತು. ಉದಯಗಿರಿಯ ತಾವಾ ಗುಹೆಯಲ್ಲಿ ಪೂರ್ಣ ವಿಮಾನಾಕೃತಿಯನ್ನು ಕೊರೆಯಲಾಗಿತ್ತು. ಮಹಾಬಲಪುರದಲ್ಲಿ ಅಂಥ 9 ಏಕಶಿಲಾ ನಿರ್ಮಾಣಗಳಿವೆ. ಅವುಗಳಲ್ಲಿ ವಿಮಾನದ ಹೊರಗಣ ವಾಸ್ತು ಲಕ್ಷಣಗಳನ್ನು ವಿವರವಾಗಿ ರೂಪಿಸಿರುವುದರೊಂದಿಗೆ ಬಹುಮಟ್ಟಿಗೆ ಒಳಗಣ ಭಾಗಗಳನ್ನು ರೂಪಿಸಲಾಗಿದೆ. ಗುಡ್ಡಗಳ ಭಾಗವಾಗಿಯೋ ಬಿಡಿಯಾಗಿಯೋ ಇದ್ದ ಒಂದೇ ಬಂಡೆಗಳಲ್ಲಿ ಮೇಲಿನಿಂದ ಕೆಳಕ್ಕೆ ಕೊರೆದು ಬೇಕಾದ ಆಕಾರಗಳಲ್ಲಿ ಅವನ್ನು ರೂಪಿಸಲಾಗುತ್ತಿತ್ತು. ಆದರೆ ಶಾಸ್ತ್ರಾನುಸಾರವಾಗಿ ಸ್ತೂಪ ಅಥವಾ ಕಲಶವನ್ನು ವಿಮಾನ ಪೂರ್ಣರೂಪಡೆದ ಅನಂತರ ಪ್ರತಿಷ್ಠಾಪನೆಯ ಕಾಲದಲ್ಲಿ ಸ್ಥಾಪಿಸಬೇಕಾಗಿದ್ದುದರಿಂದ ಅದನ್ನು ಪೂರ್ಣ ಘಟದ ಆಕಾರದಲ್ಲಿ ಮತ್ತೊಂದು ಕಲ್ಲಿನಲ್ಲಿ ನಿರ್ಮಿಸಿ ಶಿಖರಾಗ್ರದಲ್ಲಿಡಲಾಗುತ್ತಿತ್ತು. ಇವುಗಳ ನಿರ್ಮಾಣಕಾರ್ಯ 630ರಿಂದ 700ರ ವರೆಗೆ ನಡೆದಿರಬಹುದು. 

ಮಹಾಬಲಿಪುರದ ದಕ್ಷಿಣದಲ್ಲಿ ಸಮುದ್ರದಂಡೆಯಲ್ಲಿ ಉತ್ತರ-ದಕ್ಷಿಣವಾಗಿರುವ ಒಂದು ದೊಡ್ಡ ಬಂಡೆಯಲ್ಲಿ ದ್ರೌಪದಿ, ಅರ್ಜುನ, ಭೀಮ ಮತ್ತು ಧರ್ಮರಾಜ ರಥಗಳನ್ನು ಕೆತ್ತಲಾಗಿದೆ. ಅಲ್ಲಿರುವ ಮತ್ತೊಂದು ಸಣ್ಣ ಬಂಡೆಗಲ್ಲಿನಲ್ಲಿ ನಕುಲ-ಸಹದೇವ ರಥವನ್ನೂ ಒಂದು ಆನೆ ಮತ್ತು ಸಿಂಹಗಳನ್ನೂ ಕೆತ್ತಲಾಗಿದೆ. ಈಗಿನ ಊರಿನ ಮಧ್ಯದ ಗುಡ್ಡದ ಮೇಲೆ ಗಣೇಶ ರಥವನ್ನೂ ಗುಡ್ಡದ ಪಶ್ಚಿಮ ಭಾಗದಲ್ಲಿ ಎರಡು ಪಿಡಾರಿ ರಥಗಳನ್ನೂ ವಳೈಯನ್ ಕುಟ್ಟೈ ರಥವನ್ನು ಕಡೆಯಲಾಗಿದೆ. ಇವುಗಳಲ್ಲಿ ಬಹಳ ಸರಳವಾದ ದ್ರೌಪದಿ ರಥ ಗುಡಿಸಲ ಮಾದರಿಯದು. ಇದು ನಾಲ್ಕು ಮುಖಗಳ ಗುಮ್ಮಟಾಕಾರದ ಚಾವಣಿಯ ಮೇಲೆ ಒಂದು ಕಲಶವುಳ್ಳ ಏಕತಲ ವಿಮಾನವಾಗಿದೆ. ತಳದಿಂದ ಶಿಖರದ ವರೆಗೆ ಚೌಕಾಕೃತಿಯುಳ್ಳ ಇದು ಕೂಟಗಾರ ಜಾತಿಯದು. ಎರಡಂತಸ್ತುಗಳ ವಿಮಾನದ ರೀತಿಯಲ್ಲಿ ತಳದಿಂದ ಶಿಖರದ ವರೆಗೆ ಚೌಕಾಕಾರದ, ಮತ್ತು ಮೊದಲಂತಸ್ತಿನ ಕಪೋತಗಳ ಮೇಲೆ ಸಣ್ಣ, ಗುಡಿಗಳನ್ನು ಹೋಲುವ ಕೂಟ ಮತ್ತು ಶಾಲಾಗಳ ಹಾರಗಳಿರುತ್ತವೆ. ಈ ಪರಿವರ್ತನೆಯ ಮೊದಲ ಹಂತವನ್ನು ವಳೈಯನ್ ಕುಟ್ಟೈ ಮತ್ತು ಪಿಡಾರಿ ಗುಂಪಿನ ಉತ್ತರದ ರಥಗಳಲ್ಲಿ ಕಾಣಬಹುದು. ದಕ್ಷಿಣ ಪಿಡಾರಿ ಮತ್ತು ಅರ್ಜುನ ರಥಗಳು ಎರಡು ಅಂತಸ್ತುಗಳುಳ್ಳವಾಗಿವೆ. ಆದರೆ ಎರಡು ಅಂತಸ್ತುಗಳಲ್ಲೂ ಕೂಟ ಮತ್ತು ಶಾಲಾಗಳ ಹಾರ ಪ್ರತ್ಯೇಕವಾಗಿರುವುದರಿಂದ ಅವನ್ನು ಪರಿವರ್ತನೆಯ ಮುಂದಿನ ಹಂತಕ್ಕೆ ಸೇರಿಸಬಹುದು. ಅವುಗಳ ಮೇಲ್ಭಾಗದಲ್ಲಿ ಗ್ರೀವ ಮತ್ತು ಶಿಖರಗಳಿಗೆ ಅಷ್ಟಮುಖಗಳಿವೆ. ಅದರ ಮುಂದಿನ ಹಂತವನ್ನು ಧರ್ಮರಾಜ ರಥದಲ್ಲಿ ಕಾಣಬಹುದು.

ಧರ್ಮರಾಜ ರಥ ಮೂರು ಅಂತಸ್ತುಗಳ ವಿಮಾನ. ಅದರ ಅಂತಸ್ತು ತಳಗಳು ಚದರವಾಗಿಯೂ, ಗ್ರೀವಶಿಖರ ಪ್ರದೇಶ ಅಷ್ಟಮುಖಿಯಾಗಿಯೂ ಇವೆ; ಮತ್ತು ಮೂರು ಅಂತಸ್ತುಗಳಲ್ಲೂ ಒಳಭಾಗವನ್ನು ಕೊರೆದು ಅವನ್ನು ಒಂದರಮೇಲೊಂದರಂತೆ ಇರುವ ಗರ್ಭಗುಡಿಗಳನ್ನಾಗಿ ಉಪಯೋಗಿಸಲಾಗಿದೆ. ಇತರ ರಥಗಳಲ್ಲಿರುವಂತೆ ಅವು ಕೇವಲ ಔಪಚಾರಿಕವಲ್ಲ. ಪ್ರತಿಯೊಂದು ತಳ ಅಥವಾ ಅಂತಸ್ತಿನ ಸುತ್ತಲೂ ಕಟಕಟೆಯಿದೆ. ಆದಿತಳದ ನಾಲ್ಕು ಮೂಲೆಗಳಲ್ಲೂ ಮಾತ್ರ ಕಟಕಟೆಗಳಿವೆ. ನಾಲ್ಕೂ ಬದಿಗಳ ಮಧ್ಯ ಭಾಗದಲ್ಲಿ ಸಿಂಹ ಪೀಠವಿರುವ ಎರಡು ಕಂಬಗಳು, ಎರಡು ಅರಗಂಬಗಳು ಇವೆ. ಮೂಲೆಗಳಲ್ಲಿ ದೇವದೇವಿಯರ ವಿಗ್ರಹಗಳಿವೆ. ಮೂರು ತಳಗಳಲ ಕಪೋತಗಳು ಕೂಟ, ಶಾಲಾಗಳ ಹಾರ ರೂಪದಲ್ಲಿವೆ. ಇವು ಅನುಕ್ರಮವಾಗಿ ಮೇಲಿನ ತಳದ ಪ್ರದಕ್ಷಿಣ ಮಾರ್ಗದ ಹೊರ ಕಟಾಂಜನವಾಗಿ ಪರಿಣಮಿಸಿದೆ. ಆದಿತಳದ ಮುಖ ಮಂಟಪದ ಹಾರದ ಮಧ್ಯದಲ್ಲಿ ಅರೆಕೊಳವೆಯ ಆಕೃತಿಯ ಪಂಜರವಿದೆ. ಮೂರನೆಯ ತಳದ ಮೇಲಿರುವ ಗ್ರೀವ ಮತ್ತು ಶಿಖರಗಳು ಅಷ್ಟಮುಖಿಗಳು ಕೆಳಗಿನ ಎರಡು ತಳಗಳ ಗರ್ಭಗುಡಿಗಳ ಒಳಭಾಗದ ಕೆತ್ತನೆ ಪೂರ್ಣವಾಗಿಲ್ಲ. ಮೂರನೆಯ ತಳದ ಗರ್ಭಗುಡಿಯ ಕೆತ್ತನೆಯ ಕೆಲಸ ಪೂರ್ಣವಾಗಿದೆ; ಅದರ ಹಿಂಭಾಗದ ಗೋಡೆಯ ಮೇಲೆ ಸೋಮಸ್ಕಂಧ ಶಿಲ್ಪವಿದೆ. ಬ್ರಹ್ಮವಿಷ್ಣುಗಳನ್ನು ಇಬ್ಬದಿಗಳಲ್ಲಿ ಕೆತ್ತಲಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಮೂರು ತಳಗಳ ಹೊರಗೋಡೆಗಳ ಮೇಲೆ ಮಾಡಗಳಲ್ಲಿ ದೇವತಾಶಿಲ್ಪಗಳನ್ನು ಕೆತ್ತಲಾಗಿದೆ. ಪಲ್ಲವ ಮೊದಲ ಹಂತದ ಮೂರ್ತಿಶಿಲ್ಪ ಲಕ್ಷಣಗಳನ್ನು ಅವುಗಳಲ್ಲಿ ಕಾಣಬಹುದಾಗಿದೆ.

ಭೀಮ ಮತ್ತು ಗಣೇಶ ರಥಗಳು ಶಾಲಾಪದ್ಧತಿಯ ಲಂಬಾಕಾರದ ವಿಮಾನ ಶೈಲಿಗೆ ಸೇರಿವೆ. ಅವಕ್ಕೆ ಅರೆಕೊಳವಿಯ ಆಕಾರದ ಚಾವಣಿಗಳಿವೆ. ಚಾವಣಿಯ ಮೇಲೆ ಮೂರು ಅಥವಾ ಐದು ಕಳಶಗಳ ಸಾಲಿದೆ. ಭೀಮರಥ ಒಂದು ಅಂತಸ್ತಿನದೂ ಗಣೇಶ ರಥ ಎರಡು ಅಂತಸ್ತುಗಳದೂ ಆಗಿವೆ. ನಕುಲ ಸಹದೇವ ರಥ ಗಜಪೃಷ್ಠಾಕೃತಿಯದು. ಇದೆ ಮುಂಭಾಗದ ಕಪೋತದ ಹಾರದಲ್ಲೂ ಧರ್ಮರಾಜ ರಥದ ಮೊದಲ ಅಂತಸ್ತಿನ ಹಾರದಲ್ಲಿರುವಂಥ ಅರೆಕೊಳವಿಯ ಆಕೃತಿಯ ಪಂಜರವಿದೆ.

ಅರ್ಜುನ ಮತ್ತು ಧರ್ಮರಾಜ ರಥಗಳ ಗೋಡೆಗಳ ಗೂಡುಗಳಲ್ಲಿ ಕೆಲವು ಸುಂದರ ಶಿಲ್ಪಗಳಿವೆ. ದ್ರೌಪದಿ ರಥದ ಗರ್ಭಗುಡಿಯಲ್ಲಿ ದುರ್ಗಾ, ಮತ್ತು ಧರ್ಮರಾಜ ರಥದ ಮೂರನೆಯ ತಳದ ಗರ್ಭಗುಡಿಯಲ್ಲಿ ಸೋಮಾಸ್ಕಂಧ ಉಬ್ಬುಶಿಲ್ಪಗಳಿವೆ. ಉಳಿದವುಗಳಲ್ಲಿ ಯಾವ ಪ್ರತಿಮೆಗಳೂ ಇಲ್ಲ. ಗರ್ಭಗುಡಿಗಳಿಂದ ಅಭಿಷೇಕ ಜಲ ಹೊರಹೋಗಲು ಅನಂತರಕಾಲದ ಗುಡಿಗಳಲ್ಲಿರುವಂಥ ಮಾರ್ಗಗಳಿಲ್ಲ. ಮುಖಮಂಟಪಗಳ ಕಂಬ ಅರಗಂಬಗಳ ಬುಡದಲ್ಲಿ ಕುಳಿತ ಸಿಂಹಪೀಠಗಳೂ ಮೇಲ್ಭಾಗದಲ್ಲಿ ತರಂಗಶೈಲಿ ಬೋದಿಗಳೂ ಇವೆ. ನಕುಲ ಸಹದೇವ ರಥದ ಕಂಬಗಳಿಗೆ ಗಜಪೀಠಗಳೂ ಗಣೇಶ ರಥದ ಕಂಬಗಳಿಗೆ ಕೊಕ್ಕಿನ ಮುಖದ ವಾಳಿಪೀಠಗಳೂ ಇವೆ. ದ್ರೌಪದಿ, ವಳೈಯನ್ ಕುಟ್ಟೈ ಮತ್ತು ಉತ್ತರ ಪಿಡಾರಿ ರಥಗಳ ಬಾಗಿಲುಗಳ ಮತ್ತು ಗೂಡುಗಳು ಮೇಲ್ಭಾಗದಲ್ಲಿ ಅರಗಂಬಗಳ ಮೇಲೆ ಮಕರತೋರಣಗಳಿವೆ.

ಕಟ್ಟಡ ದೇವಾಲಯಗಳು : ಪರಮೇಶ್ವರನ (669-691) ಕಾಲದಲ್ಲಿ ಮೊದಲ ಬಾರಿಗೆ ಪಲ್ಲವ ದೊರೆಗಳು ಕಲ್ಲಿನಲ್ಲಿ ಕೊರೆದ ದೇವಾಲಯಗಳು ಬದಲು, ಕಡೆದ ಕಲ್ಲುಗಳಿಂದ ದೇವಾಲಯ ನಿರ್ಮಾಣ ಪ್ರಾರಂಬಿಸಿದರು. ತಿರುಕ್ಕಳುಕುನ್ರಮ್ ಗುಡ್ಡದ ಮೇಲಿರುವ ವೇದಗಿರೀಶ್ವರ ದೇವಾಲಯ ಅವುಗಳಲ್ಲಿ ಮೊದಲನೆಯದಾಗಿದೆ. ಅದರ ನಾಲ್ಕು ಗೋಡೆಗಳಿಗೆ ದೊಡ್ಡ ಕಲ್ಲುಚಪ್ಪಡಿಗಳನ್ನು ನಿಲ್ಲಿಸಿ ಮೇಲೆ ಚಾವಣಿಗೆ ವಿಶಾಲವಾದ ಮತ್ತೊಂದು ಚಪ್ಪಡಿಯನ್ನು ಹೊದಿಸಲಾಗಿತ್ತು. ಅನಂತರಕಾಲದಲ್ಲಿ ಗೋಡೆಯ ಹೊರತಳಭಾಗದಲ್ಲಿ ಕಲ್ಲಿನ ಮುನ್‍ಚಾಚಿದ ಗೋಲುಪಟ್ಟಿಕೆಗಳನ್ನು ಸೇರಿಸಲಾಗಿತ್ತು. ಗೋಡೆಯ ಚಪ್ಪಡಿಗಳ ಒಳಮುಖದ ಮೇಲೆ ಸೋಮಾಸ್ಕಂಧ ಮೊದಲಾದ ಉಬ್ಬುಶಿಲ್ಪಗಳನ್ನು ಕಡೆಯಲಾಗಿತ್ತು. ಅದೇ ಜಿಲ್ಲೆಯ ಕೊರಮ್ ಗ್ರಾಮದಲ್ಲಿ ಅದೇರಾಜನ ಕಾಲದಲ್ಲಿ ಗಜಪೃಷ್ಠಾಕೃತಿಯ ಮತ್ತೊಂದು ದೇವಾಲಯ ನಿರ್ಮಿಸಲಾಯಿತು. ಅದರ ಅಧಿಷ್ಠಾನದ ಗೋಲು ಪಟ್ಟಿಕೆಗಳನ್ನು ಅಡ್ಡಲಾಗಿ ಪೇರಿಸಿದ ಚಪ್ಪಡಿಗಳಿಂದ ನಿರ್ಮಿಸಿ ಅದರ ಮೇಲೆ ಗೋಡೆಗಳ ಸಲುವಾಗಿ ಚಪ್ಪಡಿಗಳನ್ನು ನಿಲ್ಲಿಸಲಾಗಿದೆ. ಗೋಡೆಯ ಚಪ್ಪಡಿಗಳಿಗೆ ಆಧಾರವಾಗಿ ಒಳಭಾಗದಿಂದ ಇಟ್ಟಿಗೆ ಕಟ್ಟಡವನ್ನು ಕಟ್ಟಲಾಗಿದೆ.

ಎರಡನೆಯ ನರಸಿಂಹವರ್ಮ ರಾಜಸಿಂಹ (691-728) ಕಾಲದಲ್ಲಿ ಸುಧಾರಿತ ಶೈಲಿಯ ಅನೇಕ ಕಟ್ಟಡ ದೇವಾಲಯಗಳನ್ನು ನಿರ್ಮಿಸಲಾಯಿತು. ಅವನು ಮಹಾಬಲಿಪುರದ ಕಡಲತೀರದ ದೇವಾಲಯ, ದಕ್ಷಿಣ ಆರ್ಕಾಟು ಜಿಲ್ಲೆಯ ಪನಮಲೆಯ ತಾಳಗಿರೀಶ್ವರ ದೇವಾಲಯ ಮತ್ತು ರಾಜಧಾನಿ ಕಂಚಿಯಲ್ಲಿ ಕೆಲವು ದೇವಾಲಯಗಳನ್ನು ರಾಜಸಿಂಹ ಶೈಲಿಯಲ್ಲಿ ಕಟ್ಟಿಸಿದ್ದಾನೆ. ಮಹಾಬಲಿಪುರದ ಕಡಲತೀರದ ದೇವಾಲಯ ಈ ಶೈಲಿಯ ಮೊದಲ ನಿರ್ಮಾಣ. ಮೂರು ಗುಡಿಗಳ ಆ ಸಮೂಹದಲ್ಲಿ ಪೂರ್ವದಲ್ಲಿ ಸಮುದ್ರಾಭಿಮುಖವಾಗಿ ಕ್ಷತ್ರಿಯ ಸಿಂಹೇಶ್ವರ, ಪಶ್ಚಿಮದಲ್ಲಿ ರಾಜಸಿಂಹೇಶ್ವರ, ಅವೆರಡರ ನಡುವೆ ಶಿಖರವಿಲ್ಲದ ಗುಡಿಯಲ್ಲಿ ಅನಂತಶಾಯಿ ವಿಷ್ಣುಮಂದಿರ ಇವೆ. ರಾಜಸಿಂಹೇಶ್ವರ ಗುಡಿಯ ಮುಂದೆ ಗೋಪುರವಿರುವ ಮಂಟಪಗಳಿವೆ. ಅವೆಲ್ಲವನ್ನೂ ಬಳಸಿ ಪ್ರಾಕಾರವಿದೆ. ಕ್ಷತ್ರಿಯ ಸಿಂಹೇಶ್ವರನ ವಿಮಾನ ಎತ್ತರವಾದ ಅಧಿಷ್ಠಾನದ ಮೇಲೆ ಅರ್ಧ ಮತ್ತು ಮುಖಮಂಟಪಗಳನ್ನೂ ಪ್ರತ್ಯೇಕ ಸುತ್ತು ಗೋಡೆಯನ್ನೂ ಹೊಂದಿದೆ. ರಾಜಸಿಂಹೇಶ್ವರ ವಿಮಾನದ ಅಡಿಪಾಯದಿಂದ ಗ್ರೀವದ ವರೆಗೂ ಚದರವಾದ ಮೂರು ಅಂತಸ್ತುಗಳಿವೆ. ಪ್ರತಿ ಅಂತಸ್ತಿನ ಕಪೋತಗಳ ಮೇಲೆ ಕೂಟ ಮತ್ತು ಶಾಲಾಗಳ ಹಾರಗಳಿವೆ. ಎತ್ತರವಾದ ಮೂರನೆಯ ಅಂತಸ್ತಿನ ಮೂಲೆಗಳಲ್ಲಿ ಭೂತಗಣಗಳ ಶಿಲ್ಪಗಳಿವೆ. ಎತ್ತರವಾದ ಗ್ರೀವ ಮತ್ತು ಶಿಖರಗಳಿಗೆ ಅಷ್ಟಮುಖಗಳಿವೆ. ಶಿಖರದ ಮೇಲೆ ಕಪ್ಪು ಬಸಾಲ್ಟ್ ಶಿಲೆಯ ಸ್ತೂಪಿ (ಕಳಶ) ಇದೆ. ಕ್ಷತ್ರಿಯ ಸಿಂಹೇಶ್ವರದ ನಾಲ್ಕಂತಸ್ತುಗಳ ವಿಮಾನ ಗ್ರೀವದ ವರೆಗೂ ಚದರವಾಗೂ, ಗ್ರೀವ ಮತ್ತು ಶಿಖರ ಭಾಗ ಅಷ್ಟಮುಖಿಯಾಗೂ ಇವೆ. ಸುತ್ತಲ ಪ್ರಾಕಾರಕ್ಕಿಂತಲೂ ಎತ್ತರವಾದ ಅಧಿಷ್ಠಾನದ ಮೇಲೆ ಗರ್ಭಗುಡಿಯಿದೆ. ಅದರ ಚಾವಣಿಯ ನಾಲ್ಕು ಮೂಲೆಗಳಲ್ಲಿ ಕುಳಿತ ಸಿಂಹಗಳ ಶಿಲ್ಪಗಳಿವೆ. ಪ್ರಕಾರದ ಗೋಡೆಯ ಮೇಲೆ ಕೂಟ ಮತ್ತು ಶಾಲಾಗಳ ಹಾರವಿದೆ. ಪೂರ್ವದಿಕ್ಕಿನ ಮಧ್ಯದಲ್ಲಿರುವ ಶಾಲಾ ಎತ್ತರದಲ್ಲಿದ್ದು ಅಲ್ಲಿರುವ ಬಾಗಿಲ ಮೇಲೆ ದಾಲವಂದದಂತಿದೆ. ಎರಡನೆಯ ಅಂತಸ್ತಿನ ಮೇಲಿನ ಹಾರದಲ್ಲಿ ನಾಲ್ಕು ಕರ್ಣಕೂಟಗಳು, ನಾಲ್ಕು ಭದ್ರ ಶಾಲಾಗಳು, ಎಂಟು ಪಂಜರಗಳು ಇವೆ. ಮೂರನೆಯ ಅಂತಸ್ತಿನ ಮೂಲೆಗಳಲ್ಲಿ ಭೂತಗಳ ಶಿಲ್ಪಗಳುಂಟು. ಶಿಖರದ ಮೇಲೆ ಕಪ್ಪು ಬಸಾಲ್ಟ್ ಶಿಲೆಯ ಸ್ತೂಪಿಯನ್ನು ಇಡಲಾಗಿದೆ. ಕ್ಷತ್ರಿಯ ಸಿಂಹೇಶ್ವರ ಮತ್ತು ರಾಜಸಿಂಹೇಶ್ವರಗಳ ಗರ್ಭಗುಡಿಯ ಹಿಂಭಾಗದ ಗೋಡೆಗಳ ಮೇಲೆ ಸೋಮಾಸ್ಕಂಧ ಉಬ್ಬುಶಿಲ್ಪಗಳನ್ನು ಕಡೆದಿದೆ. ಅನಂತರ ಕಾಲದಲ್ಲಿ ನೆಲದ ಮಧ್ಯದಲ್ಲಿ ಶಿವಲಿಂಗಗಳನ್ನು ಸ್ಥಾಪಿಸಲಾಯಿತು.
ಪನಮಲೆಯ ತಾಳಗಿರೀಶ್ವರ ಗುಡಿ ಕೆಂಪು ಗ್ರ್ಯಾನೈಟ್ ಶಿಲೆಯ ನಾಲ್ಕು ಅಂತಸ್ತುಗಳ ಚದರ ತಳಹದಿಯಿಂದ ಕೂಡಿದ ಕಟ್ಟಡ. ಅದರ ಮೊದಲ ಅಂತಸ್ತಿನ ಗೋಲು ಪಟ್ಟಿಕೆಗಳುಳ್ಳ ಅಧಿಷ್ಠಾನ ಮತ್ತು ಪಾಶ್ರ್ವದ ಗೋಡೆಗಳು ನಾಲ್ಕು ದಿಕ್ಕುಗಳ ಮಧ್ಯದಲ್ಲಿ ಮುಂದಕ್ಕೆ ಚಾಚಿರುವುದರಿಂದ ಉಂಟಾದ ಆಯಾಕಾರದ ಕೋಣೆಗಳಲ್ಲಿ ಪೂರ್ವದಲ್ಲಿರುವುದನ್ನು ಅಚಿತರಾಳವಾಗಿಯೂ ಪಾಶ್ರ್ವಗಳಲ್ಲಿರುವವನ್ನು ಗುಡಿಗಳಾಗಿಯೂ ಬಳಸಲಾಗಿದೆ. ಮೊದಲ ಅಂತಸ್ತಿನ ಮೇಲೆ ಕರ್ಣಕೂಟ ಮತ್ತು ಭದ್ರಶಾಲಾಗಳಹಾರವಿದೆ. ಎರಡು ಮತ್ತು ಮೂರನೆಯ ಅಂತಸ್ತುಗಳ ಮೇಲೂ ಅಂಥ ಹಾರಗಳಿವೆ. ನಾಲ್ಕನೆಯ ಅಂತಸ್ತಿನ ಮೇಲೆ ಹಾರವಿಲ್ಲ ; ಮೂಲೆಗಳಲ್ಲಿ ನಂದಿಶಿಲ್ಪಗಳಿವೆ. ಕಲ್ಲಿನಲ್ಲಿ ಮಾಡಿದ್ದ ಮೊದಲಿನ ಗ್ರೀವ ಮತ್ತು ಶಿಖರಗಳು ಹಾಳಾದುದರಿಂದ ಈಗ ಅವನ್ನು ಗಾರೆಯಲ್ಲಿ ಮಾಡಲಾಗಿದೆ. ಲೋಹದ ಕಳಶವೂ ಈಚಿನದು. ಗರ್ಭಗುಡಿಯಲ್ಲಿ ಹಿಂದಿನ ಗೋಡೆಯ ಮೇಲೆ ಸೋಮಸ್ಕಂಧಶಿಲ್ಪವಿದೆ; ನೆಲದ ಮೇಲೆ ಶಿವಲಿಂಗವಿದೆ. ಅರ್ಧಮಂಟಪದ ಒಳಗೋಡೆಗಳ ಮೇಲೆ ಬ್ರಹ್ಮ ಮತ್ತು ವಿಷ್ಣು ಇವರ ಉಬ್ಬುಶಿಲ್ಪಗಳುಂಟು. ಉತ್ತರಕ್ಕಿರುವ ಗರ್ಭಗುಡಿಯ ಹಿಂದಿನ ಗೋಡೆಯ ಮೇಲೆ ತಾಂಡವನೃತ್ಯದಲ್ಲಿ ನಿರತನಾದ ಶಿವ ಮತ್ತು ಪಾರ್ವತಿಯರ ವರ್ಣಚಿತ್ರವಿದೆ. ಅದು ಪಲ್ಲವರ ಪ್ರಾಚೀನತಮ ಚಿತ್ರಕಲೆಯ ನಿದರ್ಶನ. ಈಗ ಅದು ಬಹುಮಟ್ಟಿಗೆ ಹಾಳಾಗಿದೆ.
ಕಂಚಿಯ ಕೈಲಾಸನಾಥ ದೇವಾಲಯ ಸಮೂಹವನ್ನು ರಾಜಸಿಂಹ ಮತ್ತು ಅವನ ಮಗ ಮಹೇಂದ್ರವರ್ಮ ಒರಟಾದ ಮರಳ್ಗಲ್ಲಿನಲ್ಲಿ ಕಟ್ಟಿಸಿದುದಾಗಿ ತಿಳಿದುಬರುತ್ತದೆ. ರಾಜಸಿಂಹೇಶ್ವರದ (ಕೈಲಾಸನಾಥ) ವಿಮಾನ ಗ್ರೀವದ ವರೆಗೆ ಚತುರಸ್ರವಾಗಿರುವ ನಾಲ್ಕು ಅಂತಸ್ತುಗಳ ಕಟ್ಟಡ; ಗ್ರೀವ ಮತ್ತು ಶಿಖರಭಾಗಗಳು ಅಷ್ಟಸ್ರವಾಗಿವೆ. ಗೋಲುಪಟ್ಟಿಕೆಗಳುಳ್ಳ ಅಧಿಷ್ಠಾನ ಮತ್ತು ಮೊದಲ ಅಂತಸ್ತಿನ ಗೋಡೆಗಳ ಹೊರಭಾಗಗಳನ್ನು ಪ್ರತಿ ದಿಕ್ಕಿನಲ್ಲೂ ನಾಲ್ಕೂ ಕಂಬಗಳಿಂದ ಪ್ರತ್ಯೇಕಿಸಲಾದ ಆಯಾಕಾರದ ಮುನ್‍ಚಾಚಿದ ಫಲಕಗಳಂತೆ ರೂಪಿಸಿರುವುದಲ್ಲದೆ, ಮೂಲೆಗಳಲ್ಲೂ ಅಂಥ ಚಾಚು ಫಲಕಗಳನ್ನು ನಿರ್ಮಿಸಲಾಗಿದೆ. ಚಾವಣಿಯ ಮೇಲೆ ಮೂಲೆಗಳಲ್ಲಿ ಕರ್ಣಕೂಟಗಳನ್ನು ಮಧ್ಯಭಾಗದಲ್ಲಿ ಭದ್ರಶಾಲಾಗಳನ್ನು ಉಳ್ಳ ಹಾರವನ್ನು ಕಾಣಬಹುದು.

ಕಟ್ಟಡಗಳ ಒಳಭಾಗದಲ್ಲಿ ಪೂರ್ವ ಭಾಗದಲ್ಲಿ ಆಯಾಕಾರದ ಅಂತರಾಳ, ಉಳಿದ ದಿಕ್ಕುಗಳಲ್ಲಿ ಎರಡು ಅಂತಸ್ತುಗಳುಳ್ಳ ವಿಮಾನಗಳು ಇವೆ. ವಿಮಾನದ ಹೊರಗೋಡೆಗಳ ಮೇಲೆ ದೊಡ್ಡ ಉಬ್ಬುಶಿಲ್ಪಗಳುಂಟು; ಒಳಗೋಡೆಗಳು ಬರಿದಾಗಿವೆ. ಪ್ರದಕ್ಷಿಣಾ ಪಥದ ಚಾವಣಿಯ ಮೇಲೆ ಶಾಲಾಗಳ ಹಾರವಿದೆ. ಆದರೆ ಎರಡನೆಯ ಅಂತಸ್ತಿನ ಮೇಲೆ ಕೂಟ, ಶಾಲಾ ಮತ್ತು ಪಂಜರಗಳಿರುವ ಹಾರವೂ ಮೂರನೆಯ ಅಂತಸ್ತಿನ ಮೇಲೆ ಕೂಟ ಮತ್ತು ಶಾಲಾಗಳ ಹಾರವೂ ನಾಲ್ಕನೆಯ ಅಂತಸ್ತಿನಲ್ಲಿ ನಾಲ್ಕು ಮೂಲೆಗಳಲ್ಲಿ ನಂದಿಶಿಲ್ಪಗಳೂ ಇವೆ. ವಿಮಾನದ ತಳಭಾಗದ ಹೊರಗೋಡೆಗಳಲ್ಲಿ ಸಿಂಹಪೀಠದ ಅರಗಂಬಗಳುಂಟು. ಇದೇ ರೀತಿಯ ಅರಗಂಬಗಳನ್ನು ಮುಂಭಾಗದ ಮಂಟಪದಲ್ಲೂ ಕಾಣಬಹುದು. ದೇವಾಲಯದ ಪ್ರಾಂಗಣದ ಸುತ್ತಲೂ ಪಾಳಿಗೋಡೆಯುಂಟು. ಮಹಾದ್ವಾರದ ಬಳಿ ಮಹೇಂದ್ರವರ್ಮ ಕಟ್ಟಿಸಿದ, ಎರಡು ಅಂತಸ್ತುಗಳ, ಶಾಲಾ ಮಾದರಿಯ ಮಹೇಂದ್ರವರ್ಮಶ್ವರ ಗುಡಿ ಇದೆ. ಅದರ ಎರಡು ಅಂತಸ್ತುಗಳಲ್ಲೂ ಹಾರಗಳಿಲ್ಲ. ಪಾಳಿಗೋಡೆಯ ಒಳಭಾಗದ ಸುತ್ತಲೂ ಗೋಡೆಗೆ ಸೇರಿದಂತೆ 53 ಸಣ್ಣ ಕೂಟರೀತಿಯ ಗುಡಿಗಳಿವೆ. ಅವುಗಳಲ್ಲಿ ಬ್ರಹ್ಮ ವಿಷ್ಣುಶಿಲ್ಪಗಳು ಸೋಮಾಸ್ಕಂಧ ವರ್ಣಚಿತ್ರಗಳೂ ಇವೆ. ಸಣ್ಣ ಗುಡಿಗಳ ಹೊರ ಗೋಡೆ ಮತ್ತು ಅವುಗಳ ನಡುವಣ ತೆರಪು ಜಾಗಗಳಲ್ಲಿ ಹಲವು ಉಬ್ಬುಶಿಲ್ಪಗಳುಂಟು ಅದರಿಂದ ಇಡೀ ದೇವಾಲಯಪರಿಸರ ಒಂದು ಶಿಲ್ಪಶಾಲೆಯಂತೆ ಭಾಸವಾಗುತ್ತದೆ. ಇವಲ್ಲದೆ ಇನ್ನೂ ಎಂಟು ಪ್ರತ್ಯೇಕ ಕೂಟರೀತಿಯ ಸಣ್ಣ ವಿಮಾನಗಳು ಮುಂಭಾಗದಲ್ಲಿವೆ. ಅವುಗಳಲ್ಲಿ ಸೋಮಾಸ್ಕಂಧ ಉಬ್ಬುಶಿಲ್ಪಗಳಿವೆ.

ಕಂಚಿಯಲ್ಲಿ 2ನೆಯ ನಂದಿವರ್ಮ ಪಲ್ಲವಮಲ್ಲ ಕಟ್ಟಿಸಿದ ವೈಕುಂಠ ಪೆರುಮಾಳ್ ದೇವಾಲಯ ಮರಳ್ಗಲ್ಲಿನ ಬೃಹತ್ ಕಟ್ಟಡ. ಅದರ ವಿಮಾನಕ್ಕೆ ನಾಲ್ಕು ಅಂತಸ್ತುಗಳಿವೆ. ಅದು ಚದರ ತಳಹದಿಯ ಅಧಿಷ್ಠಾನದ ಮೇಲೆ ನಿಂತಿದೆ. ಕೆಳಗಿನ ಮೂರು ಅಂತಸ್ತುಗಳು ಕಾರ್ಯಭಾರತ್ಮಕವಾದುವು. ಒಂದರಮೇಲೊಂದರಂತೆ ಪ್ರತಿ ಅಂತಸ್ತಿನಲ್ಲಿ ಇರುವ ಗರ್ಭಗುಡಿಗಳಲ್ಲಿ ಕೆಳಗಿನಿಂದ, ಅನುಕ್ರಮವಾಗಿ, ನಿಂತ, ಕುಳಿತ ಮತ್ತು ಮಲಗಿದ ವಿಷ್ಣು ಶಿಲ್ಪಗಳಿವೆ. ಅಧಿಷ್ಠಾನದ ಮೇಲೆ ಒಂದರೊಳಗೊಂದರಂತೆ ಕಟ್ಟಡದ ಮೂರು ಸುತ್ತುಗೋಡೆಗಳ ಮೇಲೆ ಚಾವಣಿಗಳನ್ನು ಹೊದಿಸಿ. ಈ ಮೂರು ಗರ್ಭಗುಡಿಗಳನ್ನು ರೂಪಿಸಲಾಗಿದೆ. ಎಲ್ಲಕ್ಕೂ ಒಳಗಿನ ಸುತ್ತುಗೋಡೆಗಳನ್ನು ಮೂರನೆಯ ಅಂತಸ್ತಿನ ಎತ್ತರಕ್ಕೂ ಮಧ್ಯದ ಸುತ್ತುಗೋಡೆಗಳನ್ನು ಎರಡನೆಯ ಅಂತಸ್ತಿನ ಎತ್ತರಕ್ಕೂ ಎಲ್ಲಕ್ಕೂ ಹೊರಗಿನ ಗೋಡೆಗಳನ್ನು ಮೊದಲ ಅಂತಸ್ತಿನ ಎತ್ತರಕ್ಕೂ ಕಟ್ಟಲಾಗಿದೆ. ಅದರಿಂದ ಕೆಳಗಿನ ಗರ್ಭಗುಡಿಗೆ ಎರಡು ಪ್ರದಕ್ಷಿಣ ಮಾರ್ಗಗಳಿವೆ. ಅವುಗಳಲ್ಲಿ ಹೊರಗಿನದನ್ನು ಪ್ರದಕ್ಷಿಣ ಮಾರ್ಗವಾಗಿ ಬಳಸುತ್ತಿದ್ದರೆ, ಒಳಗಿನದರಲ್ಲಿ ಎರಡು ಪಾಶ್ರ್ವಗಳಲ್ಲೂ ಮೇಲಂತಸ್ತಿನ ಪ್ರದಕ್ಷಿಣಪಥಕ್ಕೆ ಹೋಗುವ ಸೋಪಾನ ಪಂಕ್ತಿಗಳನ್ನು ನಿರ್ಮಿಸಲಾಗಿದೆ. ಎರಡನೆಯ ಅಂತಸ್ತಿನಲ್ಲಿ ಪ್ರದಕ್ಷಿಣಪಥದ ಸುತ್ತಲೂ ಕೂಟ, ಶಾಲಾ ಮತ್ತು ಪಂಜರಗಳ ಹಾರವಿದೆ. ಅದರಂತೆ ಮೂರನೆಯ ಅಂತಸ್ತಿನಲ್ಲಿರುವ ತೆರೆದ ಪ್ರದಕ್ಷಿಣಪಥದ ಸುತ್ತ ಅಂಥದೇ ಹಾರವಿದೆ. ನಾಲ್ಕನೆಯ ಅಂತಸ್ತು ಚಿಕ್ಕದಾಗಿದ್ದು. ಅದನ್ನು ಎಲ್ಲ ದಿಕ್ಕುಗಳಿಂದಲೂ ಮುಚ್ಚಲಾಗಿದೆ. ಅದರ ಮೇಲೆ ಅಷ್ಟಗ್ರೀವನ ಮತ್ತು ಶಿಖರಗಳೂ ಶಿಖರದ ಮೇಲೆ ಲೋಹದ ಕಲಶವೂ ಇವೆ. ವಿಮಾನದ ತಳಭಾಗದ ಸುತ್ತಲು ತೆರೆದ ಅಂಗಣವನ್ನು ಕಂಬಗಳ ಕೈಸಾಲೆ ಸುತ್ತುಗಟ್ಟಿದೆ. ಕೈಸಾಲೆಯ ಹೊರಗಡೆ ಕೆಳಗಿನ ಅಂತಸ್ತಿಗಿಂತ ಸ್ವಲ್ಪ ಗಿಡ್ಡಾದ ಪೌಳಿಗೋಡೆಯಂತಿದೆ. ಅದರ ಮೇಲೆ ಕೂಟ, ಶಾಲಾಗಳ ಹಾರವಿದೆ. ಹಾಗಾಗಿ ಹೊರಗಿನಿಂದ ನೋಡಿದಾಗ ಇಡೀ ದೇವಾಲಯ ಐದು ಅಂತಸ್ತುಗಳುಳ್ಳ ಆದರೆ ಮಹಾಬಲಿಪುರದ ನಾಲ್ಕಂತಸ್ತಿನ ಧರ್ಮ; ರಾಜರಥದ ಅನುಕರಣೆಯಂತೆ ಕಾಣುತ್ತದೆ. ದೇವಾಲಯದ ಎಲ್ಲ ಹೊರಗೋಡೆಗಳ ಮೇಲಿರುವ ಅನೇಕ ಶಿಲ್ಪಗಳಲ್ಲದೆ, ಕೈಸಾಲೆಯ ಹಿಂಗೋಡೆಗಳ ಮೇಲೆ ಆ ಕಾಲದ ಶಾಸನಗಳಿರುವ, ಬ್ರಹ್ಮನಿಂದ ಮೊದಲುಗೊಂಡು ನಂದಿವರ್ಮನ ವರೆಗಿನ ಪಲ್ಲವರಾಜರ ವಂಶಾವಳಿಯನ್ನು ತಿಳಿಸುವ ಶಿಲ್ಪ ಫಲಕಗಳಿವೆ. ಅವಕ್ಕೆ ಹೆಚ್ಚಿನ ಐತಿಹಾಸಿಕ ಮಹತ್ತ್ವವಿದೆ. ಈ ಶಿಲ್ಪಬಾಹುಳ್ಯದಿಂದ ವೈಕುಂಠ ಪೆರುಮಾಳ್ ದೇವಾಲಯವನ್ನು ಮತ್ತೊಂದು ಶಿಲ್ಪಸಂಗ್ರಹಾಲಯವೆಂದು ಕರೆದರೆ ತಪ್ಪಾಗಲಾರದು.

ಮಹಾಬಲಿಪುರದ ಮುಕುಂದನಾಯನಾರ್ ದೇವಾಲಯ ಎರಡಂತಸ್ತುಗಳುಳ್ಳ ಚದರ ತಳಪಾಯ ಮತ್ತು ವಿಮಾನವನ್ನೂ, ಅಷ್ಟಗ್ರೀವ, ಶಿಖರಗಳನ್ನೂ ಹೊಂದಿರುವ ಗಟ್ಟಿಕಲ್ಲಿನ ಒರಟು ಕಟ್ಟಡ, ಗರ್ಭಗುಡಿ ಮತ್ತು ಮುಂಭಾಗದ ಅರ್ಧಮಂಟಪದ ಮೇಲೆ ಹಾರವಿದೆ. ಗರ್ಭಗುಡಿಯ ಹಿಂಗೋಡೆಯಲ್ಲಿ ಸೋಮಸ್ಕಂಧ ಮೂರ್ತಿಯ ಉಬ್ಬುಶಿಲ್ಪದ ಫಲಕವಿದೆ. ಕಂಬಗಳು ಸರಳವಾಗಿವೆ. ಕಂಚಿಯಲ್ಲಿರುವ ಮುಕ್ತೇಶ್ವರ, ಮಾತಂಗೇಶ್ವರ, ಐರಾವತೇಶ್ವರ ದೇವಾಲಯಗಳ ಅಧಿಷ್ಠಾನಗಳ ತಳಭಾಗ ಮತ್ತು ಮೇಲ್ಭಾಗಗಳಿಗೆ ಗ್ರಾನೈಟ್ ಶಿಲೆಯ ಚಪ್ಪಡಿಗಳನ್ನು ಬಳಸಲಾಗಿದೆ. ಮಹಾಬಲಿಪುರದ ಗುಡ್ಡದಲ್ಲಿ ಅಲ್ಲಿ ಸಿಕ್ಕುವ ಬಿಳಿಯ ಕಲ್ಲಿನಲ್ಲಿ ಒಳಕ್ಕಣ್ಣೇಶ್ವರ ದೇವಾಲಯವನ್ನು ಕಟ್ಟಲಾಗಿದೆ. ಇವಲ್ಲೆಕ್ಕೂ ಚತುರಸ್ರ ತಳಪಾಯವೂ, ವಿವಿಧಸಂಖೈಯ ಅಂತಸ್ತುಗಳೂ ಇವೆ. ಇರವಾತನೇಶ್ವರ ಮತ್ತು ತ್ರೀಪುರಾಂತಕೇಶ್ವರ ದೇವಾಲಯಗಳು ಅಡಿಯಿಂದ ಶಿಖರದ ವರೆಗೂ ಚತುರಸ್ರವಾಗಿವೆ. ಮಾತಂಗೇಶ್ವರ ಮತ್ತು ಮುಕ್ತೇಶ್ವರ ದೇವಾಲಯಗಳಿಗೆ ಮೂರು ಅಂತಸ್ತುಗಳಿವೆ. ಇವು ಅಡಿಯಿಂದ ಗ್ರೀವದ ವರೆಗೆ ಚತರಸ್ರವಾಗಿಯೂ ಗ್ರೀವ ಮತ್ತು ಶಿಖರ ಭಾಗಗಳಲ್ಲಿ ವೃತ್ತಾಕಾರವಾಗಿಯೂ ಇವೆ. ಈ ಎಲ್ಲ ದೇವಾಲಯಗಳು ಗೋಡೆಗಳು ಮೇಲೆ ಉಬ್ಬುಶಿಲ್ಪಗಳ ಅಲಂಕರಣವುಂಟು 2ನೆಯ ನಂದಿವರ್ಮ ಪಲ್ಲವಮಲ್ಲನ ತರುವಾಯ ಕೆಲವು ದೇವಾಲಯಗಳನ್ನು ಕಂಚಿಯಿಂದ ಹೊರಗೆ ಗಟ್ಟಿಯಾದ ಗ್ರಾನೈಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಸಾಮಾನ್ಯವಾಗಿ ಅವುಗಳ ಹೊರಗೋಡೆಗಳಲ್ಲಿರುವ ಗೂಡುಗಳಲ್ಲಿ ಇಟ್ಟಿಗೆ ಮತ್ತು ಗಾರೆಯಲ್ಲಿ ಮಾಡಿದ ಶಿಲ್ಪಗಳನ್ನು ಇಡಲಾಗಿರುತ್ತದೆ. ಉತ್ತರ ಮೇರೂರಿನಲ್ಲಿ ದಂತಿವರ್ಮ ಕಟ್ಟಿಸಿದ ವೈಕುಂಠ ಪೆರುಮಾಳ್ ಮತ್ತು ಸುಂದರ ಪೆರುಮಾಳ್ ದೇವಾಲಯಗಳು ಈ ರೀತಿಯವು ಪಲ್ಲವ ಅಪರಾಜಿತವರ್ಮ (885-903) ನಿರ್ಮಿಸಿದ ತಿರುತ್ತಣಿಯ ವಿರಾಟ್ಟಾನೇಶ್ವರ ಮಂದಿರ ಒಂದು ಅಂತಸ್ತಿನ ವಿಮಾನ, ಚತುರಸ್ರ ಗರ್ಭಗುಡಿ ಮತ್ತು ಗಜಪೃಷ್ಠಾಕೃತಿಯ ಗ್ರೀವ ಮತ್ತು ಶಿಖರಗಳಿರುವ ಸುಂದರ ಕಟ್ಟಡ, ಅದರ ಗೂಡುಗಳಲ್ಲಿ ಮತ್ತು ಶಿಖರದಲ್ಲಿ ಕೆಲವು ಸುಂದರ ಶಿಲ್ಪಗಳಿವೆ.-ಪಲ್ಲವರ ದೇವಾಲಯಗಳು ತಮಿಳು ನಾಡಿನ ವಾಸ್ತು ಶಿಲ್ಪ ಇತಿಹಾಸದ ಮೊದಲ ಕಾಲಕ್ಕೆ ಸೇರುತ್ತವೆ. ಹೊಸ ಕಟ್ಟಡ ನಿರ್ಮಾಣ ಪದ್ಧತಿ, ಪ್ರಾಯೋಗಿಕ ಹಂತದಗಳಲ್ಲಿ ಪರಿಶ್ರಮ ಪಡೆದ ತರುವಾಯ ಅವರು ಸ್ಥಾಪಿಸಿದ ವಾಸ್ತು ಶಿಲ್ಪ-ಇವನ್ನು ಅನಂತರ ಕಾಲದ ಚೋಳ, ಪಾಂಡ್ಯ ಮತ್ತು ವಿಜಯನಗರದ ದೊರೆಗಳು ರೂಢಿಸಿಕೊಂಡು ಭಾರತದದ ವಾಸ್ತು ಶಿಲ್ಪ ಇತಿಹಾಸದಲ್ಲಿ ಅಮೋಘವೂ ಅದ್ಭುತವೂ ಆದ ಕಟ್ಟಡ ದೇವಾಲಯಗಳನ್ನು ದಕ್ಷಿಣ ಭಾರತಾದ್ಯಂತ ನಿರ್ಮಿಸಿದ್ದಾರೆ.

ಶಾಸನಗಳು

ಪಲ್ಲವ ಶಾಸನಗಳು ಮೊದಲಿಗೆ ಪ್ರಾಕೃತ, ತರುವಾಯ ಸಂಸ್ಕøತ ಮತ್ತು ಬೃಹತ್ಪಲ್ಲವರ ಕಾಲದಲ್ಲಿ ಸಂಸ್ಕøತ ಮತ್ತು ತಮಿಳು ಭಾಷೆಗಳಲ್ಲಿವೆ. ಮಹೇಂದ್ರವರ್ಮನ ಕಾಲಾನಂತರದ ಶಾಸನಗಳು ಹೆಚ್ಚಾಗಿ ಪಲ್ಲವ ಗ್ರಂಥಲಿಪಿಯಲ್ಲೂ ಮತ್ತೆ ಕೆಲವು ನಾಗರಿಲಿಪಿಯ ಹಿಂದಿನ ಹಂತದ ಲಿಪಿಯಲ್ಲೂ ಬರೆಯಲಾಗಿದ್ದರೆ, ಆ ಮೊದಲ ಶಾಸನಗಳನ್ನು ಬ್ರಾಹ್ಮೀಲಿಪಿಯಲ್ಲಿ ಬರೆಯಲಾಗಿತ್ತು. ಮೊದಲಿನ ಶಾಸನಗಳನ್ನು ಬಹುಮಟ್ಟಿಗೆ ತಾಮ್ರಪಟಗಳ ಮೇಲೆ ಬರೆಯಲಾಗಿತ್ತಿತ್ತು. ಅನಂತರಕಾಲದ ಶಾಸನಗಳನ್ನು ತಾಮ್ರಪಟಗಳ ಮತ್ತು ಕಲ್ಲುಬಂಡೆಗಳ ಮೇಲೆ ಕೊರೆದಿದ್ದಾರೆ. ಆ ಶಾಸನಗಳಿಂದ ಪಲ್ಲವ ದೊರೆಗಳ ವಂಶಾವಳಿ, ರಾಜಕೀಯ ಮತ್ತು ಸಾಂಸ್ಕøತಿಕ ಇತಿಹಾಸ ತಿಳಿದುಬರುತ್ತದೆ. ನೆರೆಹೊರೆಯವರೊಂದಿಗೆ ಅವರ ಸಂಬಂಧಗಳು, ಯುದ್ಧಗಳು, ಅವರು ಅನುಸರಿಸದ ಆಡಳಿತ, ಸಾಮಾಜಿಕ ಮತ್ತು ಧಾರ್ಮಿಕ ನೀತಿಗಳು, ವಿದ್ಯಾಭ್ಯಾಸಕ್ಕೆ ನೀಡಿದ ಪ್ರೋತ್ಸಾಹ ಮೊದಲಾದ ಸಂಗತಿಗಳನ್ನು ಅವರ ಶಾಸನಗಳಿಂದ ತಿಳಿಯಬಹುದು.

ಈ ವರೆಗೆ ಸಿಕ್ಕಿರುವ, ಆದಿಕಾಲದ ಪಲ್ಲವರ 17 ಶಾಸನಗಳನ್ನು ಪ್ರಾಕೃತ ಮತ್ತು ಸಂಸ್ಕøತ ಶಾಸನಗಳೆಂದು ವಿಭಜಿಸಬಹುದು. ಪ್ರಾಕೃತ ಶಾಸನಗಳಲ್ಲಿ ಪ್ರಾಚೀನತಮ ಶಾಸನವಾದ ಸಿಂಹವರ್ಮನ ಮಂಚಿಕಲ್ಲು ಶಿಲಾಶಾಸನವನ್ನು 4ನೆಯ ಶತಮಾನದ ಮೊದಲ ಕಾಲಕ್ಕೆ ನಿರ್ದೇಶಿಸಬಹುದು. ಅದರಲ್ಲಿ ಜೀವಶಿವಸ್ವಾಮಿಯ ಆರ್ಚಕರಿಗೆ ಪಲ್ಲವ ವಂಶದ ಭಾರದ್ವಾಜಗೋತ್ರದ ಸಿಂಹವರ್ಮ ಕೆಲವು ದತ್ತಿಗಳನ್ನು ಬಿಟ್ಟನೆಂದು ತಿಳಿಸಲಾಗಿದೆ. ಶಿವಸ್ಕಂಧವರ್ಮನ ಮಯಿಡವೋಲು ತಾಮ್ರಶಾಸನ ಅವನು ಅವನು ಯುವರಾಜನಾಗಿದ್ದಾಗ ವಿರಿಪರದ ಇಬ್ಬರು ಬ್ರಾಹ್ಮಣರಿಗೆ ಭೂದತ್ತಿ ನೀಡಿದ ವಿಷಯವನ್ನು ತಿಳಿಸುತ್ತದೆ. ಅದೇ ರಾಜನ ಹಿರೇಹಡಗಳ್ಳಿಯ ತಾಮ್ರಶಾಸನದಿಂದ ಅವನು ಅಗ್ನಿಷ್ಟೋಮ, ವಾಜಪೇಯಿ ಮತ್ತು ಅಶ್ವಮೇಧಯಾಗಗಳನ್ನು ಮಾಡಿದ್ದನೆಂದು ಮತ್ತು ಸಾತಾಹನಿರಟ್ಟದ ಚಿಲ್ಲಿರೇಕಕೊಡುಂಕ ಗ್ರಾಮದ ಕೆಲವು ಅಧಿಕಾರಗಳ ಬಗ್ಗೆ ಉಲ್ಲೇಖವಿದೆ. ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ ರಾಣಿ ಚಾರುದೇವಿಯ ತಾಮ್ರಶಾಸನ ತನ್ನ ಎಳೆಯ ಮಗ ವಿಜಯಬುದ್ಧವರ್ಮನ ಪರವಾಗಿ ದಾಳೂರದ ಕುಳಿಮಹಾ ತಾರಕ ಗುಡಿಯ ಪೂಜಾರಿ ನಾರಾಯಣನಿಗೆ ಭೂಮಿಯನ್ನು ಕೊಟ್ಟ ವಿಷಯವನ್ನು ನಿರೂಪಿಸುತ್ತದೆ. ಈ ನಾಲ್ಕು ಶಾಸನಗಳಿಂದ ಆ ಮೊದಲ ಪಲ್ಲವರ ವಂಶಾವಳಿ ತಿಳಿದು ಬರುತ್ತದೆ.
ಅನಂತರಕಾಲದ ಪಲ್ಲವರ ಶಾಸನಗಳನ್ನು ಸಂಸ್ಕøತ ಭಾಷೆಯಲ್ಲಿ ಹೊರಡಿಸಿದರು. ಅವುಗಳಲ್ಲಿ ಪ್ರಾಚೀನವಾದ ಒಂಗೋಡು 1 ತಾಮ್ರಶಾಸನದಲ್ಲಿ 2ನೆಯ ವಿಜಯಸ್ಕಂಧ ವರ್ಮ ತಾಂಬ್ರಾಪ್ರಸ್ಥಾನವೆಂಬಲ್ಲಿ ತಂಗಿದ್ದಾಗ ವೇದವೇದಾಂಗಪಾರಗಂತನಾದ ಗೋಲಶರ್ಮನಿಗೆ ಒಂದು ಗ್ರಾಮವನ್ನು ದತ್ತಿಬಿಟ್ಟುದಾಗಿ ಹೇಳಲಾಗಿದೆ. ಯುವಮಹಾರಾಜ ವಿಷ್ಣುಗೋಪಸ್ಕಂಧವರ್ಮನ ಆಳ್ವಿಕೆಯಲ್ಲಿ ಹೊರಡಿಸಿದ ಉರುವಪಲ್ಲೆ ತಾಮ್ರಶಾಸನದಲ್ಲಿ ವಂಶಾವಳಿಯನ್ನು ಕೊಡಲಾಗಿದೆಯಲ್ಲದೆ. ಶಾಸನಕರ್ತನನ್ನು ಪರಮಭಾಗವತನೆಂದು ವರ್ಣಿಸಿ ಅವನು ಕಂಡುಕೂರದಲ್ಲಿ ಸೇನಾಪತಿ ವಿಷ್ಣುಶರ್ಮ ಕಟ್ಟಿಸಿದ ವಿಷ್ಣುಹಾರಸ್ವಾಮಿಯ ದೇವಾಲಯಕ್ಕೆ 200 ನಿವರ್ತ ಭೂಮಿಯನ್ನು ದತ್ತಿಬಿಟ್ಟ ಸಂಗತಿಯನ್ನು ತಿಳಿಸಲಾಗಿದೆ. ಕುಮಾರರಾಷ್ಟ್ರದಲ್ಲಿದ್ದ ಒಂಗೋಡು ಗ್ರಾಮವನ್ನು ಕೆಂದೂರಿನ ಕಾಶ್ಯಪಗೋತ್ರದ ದೇವಶರ್ಮನಿಗೆ ದತ್ತಿಕೊಟ್ಟ ವಿಷಯವನ್ನು 2ನೆಯ ಸಿಂಹವರ್ಮನ ಒಂಗೋಡು ತಾಮ್ರಶಾಸನ ತಿಳಿಸುತ್ತದೆ. ಅಡಯಾರ ಪ್ರಾಂತ್ಯದ ಕಾಂಚಿವಾಯಿಲ್ ಗ್ರಾಮವನ್ನೂ ನಾಲ್ಕು ಅರಣ್ಯಪ್ರದೇಶಗಳನ್ನೂ ಆ ಗ್ರಾಮದ ನಿವಾಸಿ ಕುಳಶರ್ಮನಿಗೆ ವಿಷ್ಣುಭಕ್ತ ಮಹಾರಾಜ ನಂದಿವರ್ಮನ ದಾನಕೊಟ್ಟುದಾಗಿ ಉದಯೇಂದಿರಮ್‍ದ ತಾಮ್ರಶಾಸನ ತಿಳಿಸುತ್ತದೆ. ಅನಂತರಕಾಲದ ಪಲ್ಲವ ವಂಶ ಸ್ಥಾಪಕ ಸಿಂಹವಿಷ್ಣು ಮತ್ತು ಅವನ ತಂದೆ ಸಿಂಹವರ್ಮನ ಬಗ್ಗೆ ಸುಮಾರು 591ರ ಪಲ್ಲನ್ ಕೋವಿಲ್ ತಾಮ್ರಶಾಸನ ತಿಳಿಸುತ್ತದಲ್ಲದೆ, ಜೈನ ಗುರು ವಜ್ರನಂದಿಗೆ ವೆಣ್‍ಕುನ್ರಕ್ಕೋಟ್ಟಮ್ ವಿಭಾಗದ ಅಮನ್ ಸೇಕೈ ಗ್ರಾಮವನ್ನು ಸಿಂಹವರ್ಮ ದಾನ ಕೊಟ್ಟ ವಿಷಯವನ್ನು ತಿಳಿಸುತ್ತದೆ. ಮತ್ತು ಇವಲ್ಲದೆ ಇನ್ನೂ ಹಲವಾರು ಸಂಸ್ಕøತಶಾಸನಗಳು ಮಹೇಂದ್ರವರ್ಮಪೂರ್ವದ ಪಲ್ಲವರ ವಂಶಾವಳಿ, ಕಾಲಮಾನ ಮತ್ತು ಅವರ ಇತಿಹಾಸಗಳನ್ನು ತಿಳಿದುಕೊಳ್ಳಲು ಬಹಳ ಉಪಯುಕ್ತವಾಗಿವೆ.

ಮಹೇಂದ್ರವರ್ಮನ (610-630) ಅನೇಕ ಶಾಸನಗಳು ದೊರಕಿವೆ. ಅವುಗಳಲ್ಲಿ ಅವನ ವಿವಿಧಮುಖ ಚಟುವಟಿಕೆಗಳ ಬಗ್ಗೆ ಅನೇಕ ಮಾಹಿತಿಗಳು ದೊರಕುತ್ತವೆ. ಅವೆಲ್ಲ ಶಿಲಾಶಾಸನಗಳು. ಅವನು ನಿರ್ಮಿಸಿದ ಗುಹಾಲಯಗಳಲ್ಲಿ ಅವನ್ನು ಕೆತ್ತಲಾಗಿದೆ. ಅವನಿಗೆ ಲಲಿತಾಂಕುರನೆಂಬ ಬಿರುದಿತ್ತೆಂದೂ ಅವನಿಭಾಜನ ಪಲ್ಲವೇಶ್ವರ ದೇವಾಲಯವನ್ನು ಅವನ್ನು ನಿರ್ಮಿಸಿದನೆಂದೂ ಉತ್ತರ ಆರ್ಕಾಟ್ ಜಿಲ್ಲೆಯ ಸೀಯಮಂಗಲದ ಸ್ತಂಭೇಶ್ವರ ಗುಡಿಯ ಏಕಶಿಲಾಕಂಬಗಳ ಮೇಲಿನ ಶಾಸನದಿಂದ ತಿಳಿದುಬರುತ್ತದೆ. ಷಹಾಪ್ಪಿಡುಗು ಅಥವಾ ಲಲಿತಾಂಕುರ, ಶತ್ರುಮಲ್ಲನ್, ಗುಣಭರನ್, ಮೊದಲಾದ ಬಿರುದುಗಳಿದ್ದ ವಿಷಯ ಚೆಂಗಲ್ಪಟ್ಟು ಜಿಲ್ಲೆಯ ವಲ್ಲಮ್ ವಸಂತೇಶ್ವರ ಗುಡಿಯ ಶಾಸನದಿಂದ ವ್ಯಕ್ತವಾಗುತ್ತದೆ. ಮಹೇಂದ್ರವಾಡಿಯ ಮಹೇಂದ್ರ ವಿಷ್ಣುಗೃಹವನ್ನು ಮಹೇಂದ್ರ ತಟಾಕದ ದಂಡೆಯ ಮೇಲೆ ಗುಣಭರ ಕೊರೆಯಿಸಿದನೆಂದೂ ತಿಳಿದುಬರುತ್ತದೆ. ಪುರುಷೋತ್ತಮ, ಸತ್ಯಸಂಧ, ಶತ್ರುಮಲ್ಲ, ಗುಣಭರಮಂದಿರವನ್ನು ಬೆಟ್ಟದ ಮೇಲೆ ನಿರ್ಮಿಸಿ, ಶಿವಲಿಂಗವನ್ನು ಸ್ಥಾಪಿಸಿದ ವಿಷಯವನ್ನು ತಿರುಚಿನಾಪಳ್ಳಿಯ ಗುಹಾಲಯದ ಕಂಬಗಳ ಮೇಲಿನ ಶಾಸನ ತಿಳಿಸುವುದರೊಂದಿಗೆ, ಅವನು ಕಾವೇರಿಯ ವರೆಗೆ ರಾಜ್ಯವಿಸ್ತಾರ ಮಾಡಿದುದನ್ನು ಸೂಚಿಸುತ್ತದೆ. ಬ್ರಹ್ಮ, ಶಿವ ವಿಷ್ಣು ದೇವರಿಗೆ ಇಟ್ಟಿಗೆ, ಮರ, ಲೋಹ ಮತ್ತು ಗಾರೆಗಳನ್ನು ಉಪಯೋಗಿಸದೆ ದೇವಾಲಯ ನಿರ್ಮಿಸಿದನೆಂದು ಮಂಡಗಟ್ಟು ಶಾಸನ ಹೇಳುತ್ತದೆ. ನರೇಂದ್ರ (ಮಹೇಂದ್ರವರ್ಮ) ಶತ್ರುಮಲ್ಲೇಶ್ವರ ದೇವಾಲಯವನ್ನು ವಿಚಿತ್ರಚಿತ್ತ (ಮಹೆಂದ್ರ ವರ್ಮ) ನಿರ್ಮಿಸಿದನೆಂದು ದಳವಾನೂರಿಗೆ ಗುಹಾಶಾಸನ ತಿಳಿಸುತ್ತದೆ. ಪಲ್ಲಾವರಮ್‍ನ ಗುಹಾಶಾಸನದಲ್ಲಿ ಅವನಿಗೆ ಶ್ರೀಮಹೇಂದ್ರವಿಕ್ರಮ, ಮತ್ತವಿಲಾಸ, ಚೇಠಕಾರಿ, ವಿಚಿತ್ರಚಿತ್ತ, ಅಲುಪ್ತಕಾಮ, ಕಲಹಪ್ರಿಯ ಮತ್ತು ಸಂಕೀರ್ಣಜಾತಿ ಎಂಬ ಸಂಸ್ಕøತ ಬಿರುದುಗಳನ್ನೂ ನೀಡಲಾಗಿದೆ. ಕಂಚಿಯ ಏಕಾಂಬರೇಶ್ವರ ಗುಡಿಯ ಪೌರ್ಣಮಿ ಮಂಟಪದ ಶಾಸನದಿಂದ ಅಭಿಮುಖ, ಚಿತ್ರಕಾರ ಪುಲಿ, ವಂಬರ ದೃಢಭಕ್ತಿ ಎಂಬ ಹೊಸ ಬಿರುದುಗಳು ತಿಳಿದುಬರುತ್ತವೆ. ಪುದುಕೋಟೆಯ ಬಳಿ ಇರುವ ಕುಡುಮಿಯಾಮಲೆ ಬಂಡೆಗಲ್ಲಿನ ಶಾಸನ, ಸಂಗೀತಶಾಸ್ತ್ರದ ಪ್ರಯೋಗ ಮತ್ತು ತತ್ತ್ವಗಳನ್ನು ವರ್ಣಿಸುವ 7ನೆಯ ಶತಮಾನದ ಪಲ್ಲವ ಗ್ರಂಥಲಿಪಿಯ ದಾಖಲೆ, ಇದು ಮಹೇಂದ್ರವರ್ಮನದಲ್ಲವೆಂದೂ ಕೆಲವರೂ ಅವನದೇ ಶಾಸನವೆಂದು ಮತ್ತೆ ಕೆಲವರೂ ಹೇಳುತ್ತಾರೆ, ತಿರುಮಯಂದ ಶಾಸನವೋ ಇದೇ ರೀತಿಯದಾಗಿದ್ದು. ಸಂಗೀತದ ಬಗ್ಗೆ ತಿಳಿಸುತ್ತದೆ. ಈ ಎರಡು ಶಾಸನಗಳಿಂದ ಮಹೇಂದ್ರನ ಸಂಗೀತಶಾಸ್ತ್ರದ ಆಸಕ್ತಿ ತಿಳಿದುಬರುತ್ತದೆ. 

ನರಸಿಂಹವರ್ಮನ (630-668) ಬಾದಾಮಿಯ ಮತ್ತು ತಿರುಕ್ಕುಳುಕುನ್ರಮ್‍ನ ಎರಡು ಶಾಸನಗಳು ಮಾತ್ರ ಸಿಕ್ಕಿವೆ. ಬಾದಾಮಿಯ ಶಾಸನದಲ್ಲಿ ಅವನು ಚಾಳುಕ್ಯ ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ಬಾದಾಮಿಯನ್ನು ವಶಪಡಿಸಿಕೊಂಡ ಸಂಗತಿಯನ್ನು ತಿಳಿಸಲಾಗಿದೆ. ಎರಡನೆಯ ಶಾಸನದಲ್ಲಿ ಅವನಿಗೆ ವಾತಾಪಿಕೊಂಡನೆಂಬ ಬಿರುದು ಕೊಡಲಾಗಿದೆ.
1ನೆಯ ಪರಮೇಶ್ವರ ವರ್ಮನ (669-691) ಕೆಲವು ಶಾಸನಗಳಲ್ಲಿ ಕೊರಮ್ ತಾಮ್ರಶಾಸನ ಮುಖ್ಯವಾದ್ದು. ಪಲ್ಲವ ಲಾಂಛನವಾದ ವೃಷಭಮುದ್ರೆಯುಂಗರದಿಂದ 7 ತಾಮ್ರಪಟಗಳನ್ನು ಸೇರಿಸಲಾಗಿದೆ. ಅರ್ಧ ಸಂಸ್ಕøತ ಅರ್ಧ ತಮಿಳು ಭಾಷೆಗಳ, ಪಲ್ಲವ ಗ್ರಂಥಲಿಪಿಯ ಈ ಶಾಸನದಲ್ಲಿ ಪಲ್ಲವ ವಂಶಾವಳಿಯೂ ಶಾಸನಕರ್ತರಾಜನ ರಣವಿಜಯಗಳೂ ತಿಳಿದುಬರುವುವುಲ್ಲದೆ ಮಂಗಲಗ್ರಾಮವನ್ನು ಕೊರಮ್ ನ ಶಿವಾಲಯಕ್ಕೆ ಪರಮೇಶ್ವರ ದತ್ತಿ ನೀಡಿದ ಸಂಗತಿಯೂ ತಿಳಿಯುತ್ತದೆ. ಆ ಶಾಸನದಲ್ಲಿ ಅವನ ರೂಪ ಮತ್ತು ವ್ಯಕ್ತಿತ್ವದ ವರ್ಣನೆ ಬಹಳ ಚೆನ್ನಾಗಿದೆ. ಅವನ ಸಿಟ್ಟಂಬಾಕ್ಕಮ್ ಶಾಸನದಿಂದ ಅವನು ಅಲ್ಲಿ ನಿರ್ಮಿಸಿದ ಮತ್ತೊಂದು ದೇವಾಲಯದ ಸಂಗತಿ ತಿಳಿದುಬರುತ್ತದೆ. ಬಹುಶಃ ತಮಿಳುನಾಡಿನ ಕಟ್ಟಡ ದೇವಾಲಯನಿರ್ಮಾಣದಲ್ಲಿ ಅವನು ಮೊದಲಿಗನೆಂಬ ಸಂಗತಿ ಈ ಶಾಸನಗಳಿಂದ ತಿಳಿದುಬರುತ್ತದೆ. ಅವನ ಮತ್ತೊಂದು ತಾಮ್ರಶಾಸನದಲ್ಲಿ (668) ಅವನು ನೆಲ್ಲೂರು ಜಿಲ್ಲೆಯ ಕೆಲವು ಭಾಗಗಳನ್ನು ಜಯಿಸಿದಾಗ ನೀಡಿದ ದಾನಗಳ ಉಲ್ಲೇಖವಿದೆ.

2ನೆಯ ನರಸಿಂಹವರ್ಮನ (691-729) ಅನೇಕ ಶಾಸನಗಳು ದೊರಕಿವೆ. ಅವುಗಳಲ್ಲಿ ಅವನ ಅನೇಕ ಬಿರುದುಗಳು ಉಲ್ಲೇಖವಿದೆ. ರಾಜಸಿಂಹನೆಂಬುದು ಆ ಬಿರುದುಗಳಲ್ಲಿ ಪ್ರಮುಖವಾದ್ದು. ಅವನ ಯುದ್ಧವಿಜಯಗಳನ್ನು ಕಂಚಿ ಮತ್ತು ಮಹಾಬಲಿಪುರಗಳಲ್ಲಿ ಹಲವಾರು ದೇವಾಲಯಗಳ ನಿರ್ಮಾಣದ ವಿಷಯಗಳನ್ನು ಅವು ತಿಳಿಸುತ್ತವೆ. ಪನಮಲೆಯ ತಾಳಗಿರೀಶ್ವರ ದೇವಾಲಯದಲ್ಲಿರುವ ಶಾಸನ, ರಾಜಸಿಂಹೇಶ್ವರ (ಕಂಚಿ ಕೈಲಾಸನಾಥ) ದೇವಾಲಯದ ಶಾಸನಗಳು ಅವನ ವಂಶಾವಳಿಯ ವಿವರಗಳನ್ನು ಮತ್ತು ಆ ದೇವಾಲಯಗಳ ನಿರ್ಮಾಣವನ್ನು ತಿಳಿಸುತ್ತವೆ. ಶ್ರೀಭರ, ಚಿತ್ರಕಾರ್ಮುಕ, ಏಕವೀರ, ಶಿವಚೂಡಾಮಣಿ ಎಂಬ ಅವನ ಬಿರುದುಗಳು ಪನಮಲೆಯ ಗುಹಾಶಾಸನದಿಂದ ತಿಳಿಯುತ್ತವೆ. ಅವನ ಮಹಾಬಲಿ ಪುರದ ಸಮುದ್ರತೀರ ದೇವಾಲಯದ ಸಂಸ್ಕøತ ಶಾಸನದಿಂದ ಮೊದಲಾದ ಹೊಸ ಬಿರುದುಗಳೂ ತಿಳಿಯುವುವಲ್ಲದೆ, ಆ ದೇವಾಲಯ ಅವನ ನಿರ್ಮಾಣವೆಂದೂ ಗೊತ್ತಾಗುತ್ತದೆ. ವಾಯಲೂರಿನ ವ್ಯಾಘ್ರಪುರೀಶ್ವರ ದೇವಾಲಯದ ಶಾಸನದಲ್ಲಿ ಆದಿಕಾಲದ ಪಲ್ಲವರಿಂದ ವರೆಗಿನ ರಾಜರ ಸುಧೀರ್ಘ ಪಟ್ಟಿಯನ್ನು ನೀಡಲಾಗಿರುವುದರಿಂದ ಪ್ರಾಕೃತ, ಸಂಸ್ಕøತ ಮತ್ತು ಸಿಂಹವಿಷ್ಣು ವಂಶದ ಪಲ್ಲವರ ಪರಸ್ಪರ ಸಂಬಂಧ ವ್ಯಕ್ತವಾಗುತ್ತದೆ. ಕೈಲಾಸನಾಥ ದೇವಾಲಯದಲ್ಲಿ ಅವನ ಪತ್ನಿ ರಂಗಪತಾಕಾ ಒಂದು ಸಣ್ಣ ಗುಡಿಯನ್ನು ಕಟ್ಟಿಸಿದಳೆಂದು ತಿಳಿಯುತ್ತದೆ. ಸಾಲ್ವಾನ್‍ಕುಪ್ಪದ ಅತಿರಣಚಂಡೇಶ್ವರ ಗುಡಿಯ ಶಾಸನದಲ್ಲಿ ಕಾಲಕಾಲ, ಪರಮೇಶ್ವರ ಎಂಬ ಬಿರುದುಗಳ ಉಲ್ಲೇಖವಿದೆ.

2ನೆಯ ನರಸಿಂಹವರ್ಮನ ಹಿರಿಯ ಮಗ ಮಹೇಂದ್ರವರ್ಮ ಸಿಂಹಾಸನವನ್ನೇರದಿದ್ದರೂ ಯುವರಾಜನಾಗಿದ್ದಾಗ ಕೈಲಾಸನಾಥ ದೇವಾಲಯದ ಪ್ರಾಕಾರದಲ್ಲಿ ಮಹೇಂದ್ರೇಶ್ವರ ಶಿವಾಲಯವನ್ನು ಕಟ್ಟಿಸಿದ್ದನ್ನು ಅವನ ಶಾಸನ ತಿಳಿಸುತ್ತದೆ.
2ನೆಯ ಪರಮೇಶ್ವರವರ್ಮನ (728-731) ತಿರುವದಿಗೆಯ ವಿರಟ್ಟಾನೇಶ್ವರ ದೇವಾಲಯದ ತಮಿಳು ಶಾಸನದಲ್ಲಿ ಅವನು ಅದೇ ದೇವಾಲಯಕ್ಕೆ ಚಿನ್ನವನ್ನು ದಾನ ಮಾಡಿದ ವಿಷಯ ತಿಳಿಯುತ್ತದೆ.

2ನೆಯ ನಂದಿವರ್ಮ ಪಲ್ಲವಮಲ್ಲ (731-796) ಪಲ್ಲವ ವಂಶದ ಭಿನ್ನಶಾಖೆಗೆ ಸೇರಿದವನಾಗಿದ್ದು ಸಿಂಹಾಸನವನ್ನೇರಿದ ವಿಷಯ ಅವನ ಹಲವು ಶಾಸನಗಳಿಂದ ತಿಳಿಯುತ್ತದೆ. ಅವನ ಸುಮಾರು 20 ಶಾಸನಗಳಲ್ಲಿ ಮುಖ್ಯವಾದವು ಪಟ್ಟತ್ತಾಲ್ ಮಂಗಲಮ್, ಕಾಶಾಕ್ಕುಡಿ, ಉದಯೇಂದಿರಮ್, ಕುಲುಡಿಕ್ಕಿ, ತಂಡನ್‍ತೋಟ್ಟಮ್ ಮತ್ತು ಕೊಟ್ಟಂಗುಡಿ ಶಾಸನಗಳು, ಇವಲ್ಲದೆ, ಅವನು ಕಟ್ಟಿಸಿದ ಕಂಚಿಯ ವೈಕುಂಠ ಪೆರುಮಾಳ್ ದೇವಾಲಯದ ಮೊಗಸಾಲೆಯ ಶಿಲ್ಪಗಳ ಮೇಲಿರುವ ಸಣ್ಣ ಹೆಸರು ಶಾಸನಗಳು ಆವರೆಗಿನ ಪಲ್ಲವ ಇತಿಹಾಸದ ಬಗ್ಗೆ ಬಹಳ ಮಾಹಿತಿಗಳನ್ನೊದಗಿಸುತ್ತವೆ. ಪಟ್ಟತ್ತಾಲ್ ಮಂಗಲಮ್ ತಾಮ್ರಶಾಸನವನ್ನು 791-2ರಲ್ಲಿ ಬರೆಯಿಸಲಾಗಿತ್ತು. ಅವನು ಹಿರಣ್ಯವರ್ಮನ ಮಗನೆಂದೂ, ತನ್ನ ಸಣ್ಣವಯಸ್ಸಿನಲ್ಲಿ ಮಹಾಜನರ ಆಯ್ಕೆಗನುಸಾರವಾಗಿ ಸಿಂಹಾಸನವನ್ನೇರಿದನೆಂದೂ ಅದು ತಿಳಿಸುತ್ತದೆ. ಕಾಶಾಕ್ಕುಡಿಯ ಸಂಸ್ಕøತ ತಮಿಳು ತಾಮ್ರಶಾಸನದಲ್ಲಿ 11 ಪಟಗಳಿವೆ; ಅವರ ಲಾಂಛನ ನಂದಿಮುದ್ರೆಯ ಉಂಗುರದಿಂದ ಅದನ್ನು ಕಟ್ಟಲಾಗಿದೆ. ತ್ರಿವಿಕ್ರಮರಚಿಸಿದ ಆ ಶಾಸನದಲ್ಲಿ ಅರಸನ ಪೂರ್ಣ ವಂಶಾವಳಿಯ ವಿವರಗಳು, ಏಕಧೀರ ಮಂಗಲಮ್ (ಕೂಡುಕೊಳ್ಳಿ) ಎಂಬ ಗ್ರಾಮವನ್ನು ದತ್ತಿ ಬಿಟ್ಟ ಸಂಗತಿ, ಮತ್ತು ಸುಂಕ ವಿನಾಯಿತಿಗಳನ್ನು ತಿಳಿಸಲಾಗಿದೆ. ಉದಯಚಂದ್ರನೆಂಬ ಸೇನಾಧಿಕಾರಿಯ ಬಿನ್ನಪದ ಮೇರೆಗೆ ಅರಸ ಎರಡು ಗ್ರಾಮಗಳನ್ನು ದತ್ತಿ ನೀಡಿದ ವಿಷಯ, ಅರಸನಿಗೆ ಉದಯಚಂದ್ರ ಸಲ್ಲಿಸದ ಸೇವೆಯ ವಿವರಗಳು, ಅವನು ಸೋಲಿಸದ ಶತ್ರುರಾಜರ ವಿಷಯಗಳು ಇವನ್ನು ಉದಯೇಂದಿರಮ್ ತಾಮ್ರಶಾಸನದಲ್ಲಿ ತಿಳಿಸಲಾಗಿದೆ. ಕುಲುಡಿಕ್ಕಿಯ 763ರ ವೀರಗಲ್ಲು ಶಾಸನದಲ್ಲಿ ರಾಷ್ಟ್ರಕೂಟ ದೊರೆ ಧ್ರುವ ನಂದಿ ವರ್ಮನನ್ನು ಸೋಲಿಸಿದ ಸಂಗತಿ ಇದೆ. ತಂಡನ್‍ತೋಟ್ಟಮ್ ತಾಮ್ರಶಾಸನದಲ್ಲಿ ನಂದಿವರ್ಮನ ಏಕದೀರ ಬಿರುದು. ಗಂಗರಾಜನಿಂದ ಕಿತ್ತುಕೊಂಡ, ಉಗ್ರೋದಯ ವಜ್ರ ಮತ್ತು ಪಟ್ಟವರ್ಧನವೆಂಬ, ಅವನ ಪಟ್ಟದಾನೆಗಳ ವಿಷಯ ಇವನ್ನು ತಿಳಿಸಿದ ಅನಂತರ ವೇದಾದಿ ಅನೇಕ ವಿದ್ಯೆಗಳಲ್ಲಿ ಪಾರಂಗತರಾದ 308 ಬ್ರಾಹ್ಮಣರಿಗೆ ದಯಾಮುಖಮಂಗಲ ಗ್ರಾಮವನ್ನು ದಾನಕೊಟ್ಟ ವಿಷಯವನ್ನು ಹೇಳಲಾಗಿದೆ. ವಿಷ್ಣು ಶಿವ ದೇವಾಲಯಗಳಿಗೆ ಪೂಜೆಯ ಏರ್ಪಾಡು, ಶಾಸನ ರಚಿಸಿದ ಭಾಂಡಾರಿಕ ಕುಮಾರನ ಸಂಗತಿಗಳು ಇವನ್ನು ಅದು ನಿವೇದಿಸುತ್ತದೆ. ಕೊಟ್ರಂಗಡಿಯ ತಾಮ್ರಶಾಸನದಲ್ಲಿ ನಂದಿವರ್ಮನ ಯುದ್ಧಯಾತ್ರೆಗಳನ್ನು ವಿಶಪಡಿಸಲಾಗಿದೆ; ನಲಗೂರಿನ ವಿಪ್ರರಿಗೆ ದೊರೆ ಭೂಮಿಯನ್ನು ದಾನ ಕೊಟ್ಟ ವಿಷಯವಿದೆ.

ದಂತಿವರ್ಮನ (796-846) 14ಕ್ಕಿಂತಲೂ ಹೆಚ್ಚಿನ ಶಾಸನಗಳ ಪೈಕಿ ತಿರುವೆಳ್ಳರೈ ತೊಂಡೂರ್, ಉತ್ತರ ಮೋರೂರಿನ ನಾಲ್ಕು ಶಾಸನಗಳು, ತಿರುವಳ್ಳೀಕ್ಕೇಣಿ (ಮದರಾಸು) ಮತ್ತು ಗುಡಿಮಲ್ಲಮ್‍ನವು ಮುಖ್ಯವಾದವು. ಒಂದು ಬಾವಿಯನ್ನು ಅಗೆಸಿದುದನ್ನು ತಿರುವೆಳ್ಳರೈಯ ಪುಂಡರೀಕಾಕ್ಷ ಗುಡಿಯ ಕೊಳದ ಕಲ್ಲಿನ ಮೇಲಿನ ಶಾಸನ ತಿಳಿಸುತ್ತ. ದಂತಿವರ್ಮನಿಗೆ ಪಲ್ಲವತಿಲಕನೆಂಬ ಬಿರುದನ್ನು ಕೊಟ್ಟಿದೆ. ಈ ಬಾವಿ ತಿರುಚ್ಚಿರಾಪಳ್ಳಿಯ ಅಲಂಬಾಕ್ಕಂನಲ್ಲಿರುವುದರಿಂದ ಪಲ್ಲವರಾಜ್ಯ ಅಲ್ಲಿಯವರೆಗೆ ಇದ್ದುದು ಗೊತ್ತಾಗುತ್ತದೆ. ತೊಂಡೂರಿನ ಶಿಲಾಶಾಸನ ಅಲ್ಲಿಯ ದೇವಾಲಯಕ್ಕೆ ಚಿನ್ನವನ್ನು ದಾನಕೊಟ್ಟುದನ್ನು ತಿಳಿಸುತ್ತ ಉತ್ತರ ಮೋರುರಿನ ಶಾಸನ ಅಲ್ಲಿಯ ವೈಕುಂಠ ಪೆರುಮಾಳ್ ದೇವಾಲಯದಲ್ಲಿದೆ. ಅದು ಒಂದು ಚಿನ್ನದ ದಾನವನ್ನು ತಿಳಿಸುತ್ತವೆ ಉಳಿದ ಶಾಸನಗಳು ಒಡೆದಿವೆ. ಅವು ದಂತಿವರ್ಮನ ಹೆಸರನ್ನು ತಿಳಿಸುತ್ತವೆ. ತಿರುಪಳ್ಳಿಕ್ಕೇಣಿಯ ಶಾಸನ ಪಾರ್ಥಸಾರಥಿ ಗರ್ಭ ಗುಡಿಯಲ್ಲಿದೆ. ಅಲ್ಲಿಯ ಆರ್ಚಕರು ದೇವಾಲಯದ ಹೊಲವನ್ನು ಅಡವಿಟ್ಟುದನ್ನೂ ಪುಗಳ್‍ತುಣೈ ವಿಷಯರಾಯನೆಂಬವು ಅದನ್ನು ಬಿಡಿಸಿಕೊಟ್ಟ ವಿಷಯವನ್ನು ಅದು ತಿಳಿಸುವುದಲ್ಲದೆ ದಂತಿವರ್ಮನ ಬಗ್ಗೆ ಕೆಲವು ಮಾಹಿತಿಗಳನ್ನೊದಗಿಸುತ್ತದೆ. ಗುಡಿಮಲ್ಲದ ಶಾಸನ ದಂತಿವರ್ಮನ ಆಳ್ವಿಕೆಯ 49ನೆಯ ವರ್ಷದಲ್ಲಿ ಮಾವಲಿ ವಾಣರಾಯ ವಿಜಯಾದಿತ್ಯ ದೊರೆ ಕೆರೆಯ ರಿಪೇರಿಗೆ ಭೂಮಿಯನ್ನು ದತ್ತಿ ಕೊಟ್ಟ ವಿಷಯನ್ನು ತಿಳಿಸುತ್ತದೆ.

3ನೆಯ ನಂದಿವರ್ಮನಿಗೆ (846-869) ನಂದಿಪೋತ್ತರಸರ್, ನಂದಿವಿಕ್ರಮವರ್ಮ ವಿಜಯನಂದಿ ವಿಕ್ರಮವರ್ಮ ಎಂಬ ಹೆಸರುಗಳಿದ್ದುದು ಅವನ ಹಲವು ಶಾಸನಗಳಿಂದ ತಿಳಿದುಬರುತ್ತದೆ. ಪುದುಕ್ಕೋಟೆ ಬಳಿಯ ಕುನ್ನಂಡಾರ್ ಗ್ರಾಮದ ಪರ್ವತಗಿರೀಶ್ವರ ಗುಡಿಯಲ್ಲಿರುವ ಅವನ ಶಾಸನ 100 ಜನರಿಗೆ ಅನ್ನದಾನಕ್ಕಾಗಿ ಅಕ್ಕಿಯನ್ನು ಕೊಟ್ಟ ಸಂಗತಿಯನ್ನು ತಿಳಿಸುತ್ತದೆ. ಅವನ ವೇಲೂರ್ ಪಾಳೆಯಮ್‍ನ ತಾಮ್ರಶಾಸನದಲ್ಲಿ ವಿಷ್ಣುವಿನಿಂದ ನಂದಿವರ್ಮವರೆಗೂ ಪಲ್ಲವ ವಂಶಾವಳಿಯನ್ನು ವಿವರವಾಗಿ ನೀಡಲಾಗಿದೆ. ಅವನ ತಾಯಿ ಕದಂಬವಂಶದವಳೆಂಬುದನ್ನು ಅವನ ಆಳ್ವಿಕೆಯ 6ನೆಯ ವರ್ಷದಲ್ಲಿ ಶ್ರೀ ಕಾಟ್ಟುಪಳ್ಳಿ ಗ್ರಾಮವನ್ನು ಅಲ್ಲಿಯ ಶಿವಾಲಯಕ್ಕೆ ದತ್ತಿಬಿಟ್ಟುದನ್ನೂ ಅನೇಕ ತೆರಿಗೆಗಳಿಂದ ವಿನಾಯಿತಿ ನೀಡಿದುದನ್ನೂ ಅದು ತಿಳಿಸುತ್ತದೆ. ಅವನು ತೆಲ್ಲಾರು ಯುದ್ಧ ವಿಜಯಕಾಲದಲ್ಲಿ ಅಲ್ಲಿಯ ದೇವಾಲಯಕ್ಕೆ ದತ್ತಿ ಬಿಟ್ಟ ವಿಷಯವನ್ನು ತೆಲ್ಲಸ್ಥಾನದ ಘೃತಸ್ಥಾನೇಶ್ವರ ಗುಡಿಯ ಶಾಸನ ತಿಳಿಸುತ್ತದೆ. ತಿರುವಲ್ಲಂ ಶಾಸನದಲ್ಲಿ, ಅಲ್ಲಿಯ ಶಿವಾಲಯಕ್ಕೆ ಮೂರು ಗ್ರಾಮವನ್ನು ಚರ್ತುವೇದಿಮಂಗಲವೆಂದು ಘೋಷಿಸಿ ದೇವಾಲಯಕ್ಕೆ ದತ್ತಿ ಬಿಟ್ಟ ವಿಚಾರವನ್ನೂ ದತ್ತಿಯನ್ನು ಯಾವಯಾವ ಉದ್ಧೇಶಗಳಿಗೆ ಬಳಸಬೇಕೆಂಬ ವಿವರಗಳನ್ನೂ ನೀಡಲಾಗಿದೆ. ಕಂಚಿಯ ಉಲಗಳಂದಪೆರುಮಾಳ್ ದೇವಾಲಯದ ಗರ್ಭಗುಡಿಯ ಶಾಸನ, ಒಂದು ಗ್ರಾಮದ ವರ್ತಕರಿಗೆ ಎಲ್ಲ ರೀತಿಯ ಪದಾರ್ಥಗಳಲ್ಲೂ ವ್ಯಾಪಾರ ಮಾಡುವ ಹಕ್ಕನ್ನು ನೀಡಿದ ಸಂಗತಿಯನ್ನು ತಿಳಿಸುತ್ತದೆ. ಅವನ ಕಾಲದ ಗುಡಿಮಲ್ಲದ ಒಂದು ಶಾಸನದಲ್ಲಿ ಗ್ರಾಮವಾಸಿಗಳು ದೇವಾಲಯದ ಬಳಕೆಗೆ ಎಣ್ಣೆಯನ್ನು ತಯಾರಿಸಿ ಶೇಖರಿಸಬೇಕಾದ ಬಗ್ಗೆ ವಿವರಗಳನ್ನು ನೀಡಲಾಗಿದೆ.

ನೃಪತುಂಗವರ್ಮನ (869-895) ಶಾಸನಗಳ ಪೈಕಿ ಬಾಹೂರಿನ ತಾಮ್ರಪಟಗಳು ಬಹಳ ಮುಖ್ಯವಾದವು. ಅವುಗಳಲ್ಲಿ ವಂಶಾವಳಿಯನ್ನು ಕೊಡಲಾಗಿದೆ. ಅವನ ತಾಯಿ ರಾಷ್ಟ್ರಕೂಟ ವಂಶದವಳೆಂದೂ ಅವನು ಪಾಂಡ್ಯರನ್ನು ಸೋಲಿಸಿದನೆಂದೂ ಬಾಹೂರಿನಲ್ಲಿದ್ದ ವೇದವಿದ್ಯಾಸ್ಥಾನಕ್ಕೆ ಎಲ್ಲ ತೆರಿಗೆಗಳಿಂದ ವಿನಾಯಿತಿ ನೀಡಲಾಗಿದ್ದ ಮೂರು ಗ್ರಾಮಗಳನ್ನು ಕೊಟ್ಟನೆಂದೂ ಅದು ತಿಳಿಸುವುದಲ್ಲದೆ ಆ ವೇದಶಾಲೆಯ ಬಗ್ಗೆ ವಿವರಗಳನ್ನು ನೀಡುತ್ತದೆ. ಇವಲ್ಲದೆ ಇನ್ನೂ ಹಲವಾರು ಶಾಸನಗಳೂ ಪಲ್ಲವರ ಇತಿಹಾಸ ಸಂಸ್ಕøತಿಗಳನ್ನು ತಿಳಿಸುವ ಉತ್ತಮ ಚಾರಿತ್ರಿಕ ಮಾಹಿತಿಗಳಾಗಿವೆ.

ನಾಣ್ಯಗಳು

ದಕ್ಷಿಣ ಭಾರತದ ಪೂರ್ವತೀರಪ್ರದೇಶಗಳಲ್ಲಿ ಆಳಿದ ಮನೆತನಗಳ ಪೈಕಿ ಮೊಟ್ಟಮೊದಲು ನಾಣ್ಯಗಳನ್ನು ಮುದ್ರಿಸಿ ಬಳಸಿದವರ ಪಲ್ಲವ ದೊರೆಗಳು. ಆದರೆ ಪಲ್ಲವರ ನಾಣ್ಯಪದ್ಧತಿಯ ಬಗ್ಗೆ ಈವೆರೆಗೆ ತಿಳಿದಿರುವ ಮಾಹಿತಿಗಳು ಬಹಳ ಕಡಿಮೆಯಾಗಿದ್ದು ಗಲಿಬಿಲಿ ಉಂಟುಮಾಡುವಂತಿವೆ. ವಾಲ್ಟರ್ ಎಲಿಯಟ್ ಮತ್ತು ಟಿ. ದೇಶಿಕಾಚಾರಿ ಇವರು ಪಲ್ಲವರ ನಾಣ್ಯಗಳ ಬಗ್ಗೆ ಮೊದಲು ಅಧ್ಯಯನ ನಡೆಸಿದರು. ನಾಣ್ಯಗಳು ದೊರಕಿರುವ ಪ್ರದೇಶ ಮತ್ತು ಅವರ ಲಾಂಛನದ ಆಧಾರಗಳ ಮೇಲೆ ಅವನ್ನು ಪಲ್ಲವ ನಾಣ್ಯಗಳೆಂದು ಮತ್ತು ಅವು ನಿರ್ದಿಷ್ಟ ದೊರೆಗಳವೆಂದು ಎಲಿಯಟ್ ಹೇಳಿರುವುದಕ್ಕೆ ಸಾಕಸ್ಟು ಆಧಾರಗಳಿಲ್ಲ. ಆದರೂ ಪಲ್ಲವರ ಮುದ್ರೆಗಳ ಮೇಲೆ ಕಂಡುಬರುವ ಹಲವು ಚಿಹ್ನೆಗಳು ನಾಣ್ಯಗಳ ಮೇಲೆ ಕಂಡುಬಂದಿರುವುದರಿಂದ, ನಾಣ್ಯಗಳ ತಯಾರಿಕೆಯ ಶೈಲಿಯಿಂದ ಮತ್ತು ಪಲ್ಲವರು ಚೋಳ, ಪಾಂಡ್ಯ ಮತ್ತು ಚೀರ ದೊರೆಗಳನ್ನು ಸೋಲಿಸಿ ತಮ್ಮ ನಾಣ್ಯಗಳ ಮೇಲೆ ಅವರ ಲಾಂಛನಗಳನ್ನು ಬಳಸಿಕೊಂಡಿರಬಹುದೆಂಬ ಊಹೆಯ ಮೇಲೆ ಪಲ್ಲವರ ನಾಣ್ಯಗಳನ್ನು ಗುರುತಿಸುವ ಪ್ರಯತ್ನ ನಡೆದಿದೆ.

ಪಲ್ಲವರವೆಂದು ಹೇಳಲಾದ ನಾಣ್ಯಗಳನ್ನು ಎರಡು ಗುಂಪುಗಳಾಗಿ ವಿಭಜಿಸಬಹುದು. ಸಾಮಾನ್ಯವಾಗಿ ಛಾಪದಿಂದ ಮುದ್ರೆಯೊತ್ತಿ ತಯಾರಿಸಿದ ಮೊದಲ ಗುಂಪಿನ ತಾಮ್ರದ ನಾಣ್ಯಗಳ ಮುಮ್ಮುಖದ ಮೇಲೆ ಅವರ ಲಾಂಛನವಾದ ನಂದಿ ಮತ್ತು ಕೆಲವು ಅಕ್ಷರಗಳು ಮತ್ತು ಹಿಮ್ಮುಖದ ಮೇಲೆ ವೃಕ್ಷ, ಹಡಗು, ನಕ್ಷತ್ರ, ಏಡಿ ಅಥವಾ ಮೀನು-ಇವುಗಳಲ್ಲಿ ಒಂದು ಚಿಹ್ನೆ ಇರುತ್ತವೆ. ಕಂಚಿಯಲ್ಲಿ ನಡೆದ ಉತ್ಖನನಗಳಲ್ಲಿ ಸಿಕ್ಕಿದ 5-6ನೆಯ ಶತಮಾನಕ್ಕೆ ಸೇರುವ ಕೆಲವು ತವರದ ನಾಣ್ಯಗಳ ಮುಂಬದಿಯಲ್ಲಿ ನಂದಿಯ ಚಿಹ್ನೆಯಿದೆ; ಹಿಂಬದಿ ಬರಿದಾಗಿದೆ. ಅವನ್ನು ಪಲ್ಲವ ನಾಣ್ಯಗಳೆಂದು ಗುರುತಿಸಬಹುದು. ಹಿಂಭಾಗದಲ್ಲಿ ಹಡಗಿನ ಚಿಹ್ನೆಯುಳ್ಳ ನಾಣ್ಯಗಳು ಆ ಮುನ್ನ ಶಾತವಾಹನರು ಹೊರಡಿಸಿದ ಹಡಗಿನ ನಾಣ್ಯಗಳನ್ನು ಹೋಲುತ್ತವೆ. ಹಡಗಿನ ಚಿಹ್ನೆಯನ್ನು ನಾಣ್ಯಗಳ ಮೇಲೆ ಬಳಸಿರುವುದರಿಂದ ಪಲ್ಲವ ದೊರೆಗಳು ತಮ್ಮ ರಾಜ್ಯದ ಸಮುದ್ರತೀರದ ರೇವುಪಟ್ಟಣಗಳಿಂದ ಆಗ್ನೇಯ ಏಷ್ಯ ಪ್ರದೇಶಗಳೊಂದಿಗೂ ಸಿಂಹಳ ದ್ವೀಪದೊಂದಿಗೂ ವ್ಯಾಪಾರ ಮತ್ತು ಸಾಂಸ್ಕøತಿಕ ಸಂಬಂಧಗಳನ್ನು ಹೊಂದಿದ್ದ ವಿಷಯ ಗೊತ್ತಾಗುವುದಲ್ಲದೆ, ಅವರು ಬಲವಾದ ನೌಕಾಸೈನ್ಯ ಹೊಂದಿದ್ದ ಸಂಗತಿಯನ್ನು ತಿಳಿಸುತ್ತದೆ.

ಎರಡನೆಯ ಗುಂಪಿನ-ಛಾಪದಿಂದ ಮುದ್ರೆಯೊತ್ತಿದ-ಚಿನ್ನ, ಕಂದು ಬೆಳ್ಳಿ ಮತ್ತು ತಾಮ್ರದ - ನಾಣ್ಯಗಳ ಮುಮ್ಮಖದ ಮೇಲೆ ಒಂದು ವೃತ್ತದೊಳಗೆ ಕೇಸರ ದೊಡಗೂಡಿದ ಸಿಂಹದ ಚಿಹ್ನೆಯೂ ಹಿಂಬದಿಯಲ್ಲಿ ದೀಪಸ್ಥಂಭಗಳ ಮಧ್ಯೆಯಿರುವ ಕಲಶ ಚಕ್ರ, ಬಿಲ್ಲು, ಮೀನು, ಛತ್ರ, ಪರ್ವತ, ಕುದುರೆ ಮೊದಲಾದ ಚಿಹ್ನೆಗಳಲ್ಲೊಂದು ಇರುತ್ತವೆ. ಕೌಶಲಪೂರ್ಣವಾಗಿ ತಯಾರಿಸಿದ ಇಂಥ ನಾಣ್ಯಗಳು ಮೂರು ಆಕಾರದವಾಗಿರುತ್ತವೆ. ತಾಮ್ರ ಮತ್ತು ಕಂದು ಬೆಳ್ಳಿಯ ನಾಣ್ಯಗಳು ದೊಡ್ಡವೂ ಚಿನ್ನದ ನಾಣ್ಯಗಳು ಮಧ್ಯವರ್ತಿ ಮತ್ತು ಸಣ್ಣವೂ ಆಗಿರುತ್ತವೆ. ಈ ಸಿಂಹಾಲಾಂಛನದ ನಾಣ್ಯಗಳು ಪಲ್ಲವರವಲ್ಲವೆಂದೂ ಸಿಂಹಲಾಂಛನ ಹೊಂದಿದ್ದ ವಿಷ್ಣುಕುಂಡಿ ಅರಸರವೆಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸಿಂಹ ಪಲ್ಲವರ ಮೆಚ್ಚುಗೆಯ ಪ್ರಾಣಿಚಿಹ್ನೆಯಾಗಿತ್ತೆಂದೂ ಅವರ ಕಟ್ಟಡಗಳಲ್ಲಿ ಸಿಂಹಪೀಠದ ಕಂಬಗಳು ಬಳಕೆಯಲ್ಲಿದ್ದುವೆಂದೂ ವಿಷ್ಣುಕುಂಡಿ ಅರಸರು ಪಲ್ಲವರ ಮಾದರಿಯನ್ನನುಸರಿಸಿ ಸಿಂಹಚಿಹ್ನದ ನಾಣ್ಯಗಳನ್ನು ಬಳಸಿರಬಹುದೆಂದೂ ಮತ್ತೆ ಕೆಲವು ವಿದ್ವಾಂಸರು ವಾದ ಮಾಡಿದ್ದಾರೆ. ಕೆಲವು ನಾಣ್ಯಗಳ ಮುಂಬದಿಯಲ್ಲಿ ಕಲಶ ಮತ್ತು ಹಿಂಬದಿಯಲ್ಲಿ ವೃಕ್ಷ ಇವೆ. ಅವು ಉಳಿದ ನಾಣ್ಯಗಳಿಗಿಂತಲೂ ಹೆಚ್ಚು ಭಾರವಾಗಿವೆ. ಅವನ್ನು ಪಲ್ಲವನಾಣ್ಯಗಳೆಂದು ಒಪ್ಪಿಕೊಳ್ಳಬಹುದು.

ಈ ಎರಡು ಗುಂಪುಗಳ ನಾಣ್ಯಗಳ ತಯಾರಿಕೆಯಲ್ಲಿ ಕ್ರಮೇಣ ಕೆಲವು ಸುಧಾರಣೆಗಳಾದಂತೆ ಕಂಡುಬಂದರೂ ಆ ಬಗ್ಗೆ ನಿಶ್ಚಿತವಾಗಿ ಹೇಳಬರುವುದಿಲ್ಲ. ನಂದಿ ಚಿಹ್ನೆಯ ಕೆಲವು ನಾಣ್ಯಗಳ ಮೇಲೆ ಶಾಸನಗಳನ್ನು ಕೆತ್ತಲಾಗಿದೆ. ಆ ಶಾಸನೋಕ್ತ ದೊರೆಗಳ ಕಾಲಮಾನದಿಂದ ನಾಣ್ಯಪದ್ಧತಿಯಲ್ಲಾದ ಸುಧಾರಣೆಯನ್ನು ಗುರುತಿಸಬಹುದಾಗಿತ್ತಾದರೂ ಶಾಸನಗಳಲ್ಲಿ ಶ್ರೀನಿಧಿ, ಶ್ರೀಧರ ಅಥವಾ ಶ್ರೀ-ಶ್ರೀ ಎಂಬ ಬಿರುದುಗಳನ್ನು ಬಳಸಲಾಗಿದೆಯಾದ್ದರಿಂದ ಅವು ಯಾವ ನಿರ್ದಿಷ್ಟರಾಜನದೆಂದೂ ಹೇಳಲಾಗುವುದಿಲ್ಲ. ಆ ವಂಶದ ಹಲವು ರಾಜರಿಗೆ ಮೇಲಿನ ಬಿರುದುಗಳು ಅನ್ವಯಿಸಬಹುದು. ದೇಶಿಕಾಚಾರಿಯವರು ಶ್ರೀಭರ ನಾಣ್ಯಗಳನ್ನು ಮಹೇಂದ್ರವರ್ಮನಿಗೂ ಶ್ರೀನಿಧಿ ನಾಣ್ಯಗಳನ್ನು 2ನೆಯ ನರಸಿಂಹವರ್ಮ ರಾಜಸಿಂಹನಿಗೂ ನಿರ್ದೇಶಿಸಿದ್ದಾರೆ. ಈ ನಿರ್ದೇಶನವನ್ನು ಎಸ್.ಟಿ. ಶ್ರೀನಿವಾಸಗೋಪಾಲಾಚಾರಿ ಒಪ್ಪಿಕೊಂಡು, ವಭು ಲೇಖವುಳ್ಳ ಮತ್ತೆ ಕೆಲವು ನಾಣ್ಯಗಳನ್ನು ಮಹೇಂದ್ರವರ್ಮನಿಗೆ ನಿರ್ದೇಶಿಸಿದ್ದಾರೆ. ಆದರೆ ಈ ನಿರ್ದೇಶನಗಳಿಗೆ ಸಾಕಸ್ಟು ಆಧಾರಗಳಿಲ್ಲ. ಆ ಮನೆತನದ ಹಲವಾರು ಅರಸರು ಆ ಬಿರುದುಗಳನ್ನು ಹೊಂದಿದ್ದುದರಿಂದ ಅವರಲ್ಲಿ ಯಾರಿಗಾದರೂ ಆ ನಾಣ್ಯಗಳನ್ನು ನಿರ್ದೇಶಿಸಬಹುದು. ಶ್ರೀನಿವಾಸಗೋಪಾಲಚಾರಿ ಪ್ರಕಟಿಸಿರುವ- ಮುಂಬದಿಯಲ್ಲಿ ನಂದಿ ಮತ್ತು ಹಿಂಬದಿಯಲ್ಲಿ ಹುಲಿ, ಮೀನು ಮತ್ತು ಬಿಲ್ಲು ಚಿಹ್ನೆಗಳಿರುವ-ನಾಣ್ಯಗಳು ಪಲ್ಲವ ನಾಣ್ಯಗಳಾಗಿದ್ದು ಅನುಕ್ರಮವಾಗಿ ಚೋಳ, ಪಾಂಡ್ಯ ಮತ್ತು ಚೇರ ಪ್ರದೇಶಗಳನ್ನು ಪಲ್ಲವ ನಾಣ್ಯಗಳಾಗಿದ್ದು ಅನುಕ್ರಮವಾಗಿ ಚೋಳ, ಪಾಂಡ್ಯ ಮತ್ತು ಚೇರ ಪ್ರದೇಶಗಳನ್ನು ಪಲ್ಲವರು ಗೆದ್ದುಕೊಂಡದ್ದರ ಸ್ಮರಣೆಗಾಗಿ ಅವರ ಲಾಂಛನಗಳನ್ನು ತಮ್ಮ ನಾಣ್ಯಗಳ ಹಿಮ್ಮುಖದಲ್ಲಿ ಮುದ್ರಿಸಿರಬಹುದು. ಅನಂತರ ಚೋಳ ಸಾಮ್ರಾಟರು ಇಂಥ ಪದ್ಧತಿಯನ್ನು ತಮ್ಮ ನಾಣ್ಯಗಳಲ್ಲಿ ಅನುಸರಿಸುತ್ತಿದ್ದರು. ಮಧುರೆ ಪ್ರದೇಶದಲ್ಲಿ ಸಿಕ್ಕಿರುವ ಮತ್ತೆ ಕೆಲವು ನಾಣ್ಯಗಳ ಮುಂಬದಿಯಲ್ಲಿ ಕುಳಿತ ನಂದಿ, ಶಾಸನ ಇವೆ. ಅವೂ ಪಲ್ಲವ ರಾಜರ ನಾಣ್ಯಗಳೆಂದು ಹೇಳಬಹುದಾದರೂ ಯಾವ ರಾಜನವೆಂದು ಹೇಳಬರುವುದಿಲ್ಲ.									     (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ